ಫೋನ್ ಹಿಡಿದು ಕುಳಿತ ಸಂಸದರು – ಮೋದಿ ಕೈಯಲ್ಲಿದೆ 4 ಪಟ್ಟಿ: ಮಾನದಂಡ ಏನು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಕೆಲವೇ ಗಂಟೆಯಷ್ಟೇ ಬಾಕಿ ಇದೆ. ಆದರೆ ಇನ್ನೂ ಮೋದಿ ಸಂಪುಟದ ಸಚಿವರ ಪಟ್ಟಿ ಅಂತಿಮವಾಗಿಲ್ಲ ಎನ್ನುವ ವಿಚಾರ ಹೊರ ಬಿದ್ದಿದೆ.

ಇತ್ತ ರಾಜ್ಯ ಸಂಸದರಲ್ಲಿ ಟೆನ್ಶನ್ ಶುರುವಾಗಿದ್ದು, ಹೈಕಮಾಂಡ್ ಕರೆಗಾಗಿ ದೆಹಲಿಯಲ್ಲಿ ಸಂಸದರು ಕಾದು ಕುಳಿತ್ತಿದ್ದಾರೆ. ಬುಧವಾರ ರಾತ್ರಿಯಿಂದಲೇ ಕೈಯಲ್ಲಿ ಫೋನ್ ಹಿಡಿದು ಸಂಸದರು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ಸಂಸದರು ಕುಟುಂಬ ಸದಸ್ಯರೊಂದಿಗೆ ದೆಹಲಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಮೋದಿ 2 ಸರ್ಕಾರದಲ್ಲಿ ಕರ್ನಾಟಕದ ಮೂವರಿಗೆ ಮಂತ್ರಿ ಸ್ಥಾನ

ಆಯ್ಕೆ ಹೇಗೆ?
ಇಲ್ಲಿಯವರೆಗೆ ಜಾತಿ, ರಾಜ್ಯವಾರು ಕೋಟಾದ ಅಡಿ ಮಂತ್ರಿಗಳ ಸ್ಥಾನವನ್ನು ಹಂಚಿಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಜಾತಿ ನೋಡದೇ ಬಿಜೆಪಿ ಮತ ನೀಡಿದ್ದರಿಂದ ಮಂತ್ರಿ ಸ್ಥಾನವನ್ನು ಜಾತಿ ನೋಡದೇ ಹಂಚಿಕೆ ಮಾಡಲಾಗುತ್ತದೆ ಎನ್ನುವ ವಿಚಾರ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈ ಬಾರಿ ಬಿಜೆಪಿ ಆಡಳಿತ ರಾಜ್ಯವಲ್ಲದೇ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಒಡಿಶಾದಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಈ ಭಾಗದಲ್ಲೂ ಮಂತ್ರಿ ಸ್ಥಾನ ನೀಡಬೇಕಾಗುತ್ತದೆ.

ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ತನ್ನ ಕ್ಯಾಬಿನೆಟ್‍ನಲ್ಲಿ ಯಾರಿಗೆ ಸ್ಥಾನ ನೀಡಬೇಕು ಎನ್ನುವುದನ್ನು ಪ್ರಧಾನಿ ಮೋದಿ ಅವರೇ ತೀರ್ಮಾನಿಸುತ್ತಿದ್ದಾರೆ. ಜಾತಿ, ರಾಜ್ಯವಾರು ಕೋಟಾ ನೋಡದೇ ಅರ್ಹತೆ ಇದ್ದವರಿಗೆ ಮಾತ್ರ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಲು ಮುಂದಾಗಿದ್ದಾರೆ. ರಾಜ್ಯ ಖಾತೆಯನ್ನು ಹಂಚುವ ಜವಾಬ್ದಾರಿಯನ್ನು ಮೋದಿ ಅಮಿತ್ ಶಾ ಅವರಿಗೆ ನೀಡಿದ್ದು, ರಾಜ್ಯವಾರು ಮತ್ತು ಪಕ್ಷ ಸಂಘಟನೆ, ಎನ್‍ಡಿಎ ಮಿತ್ರ ಪಕ್ಷಗಳಲ್ಲಿ ಉತ್ತಮರು ಯಾರು ಎನ್ನುವುದನ್ನು ನೋಡಿಕೊಂಡು ಅಮಿತ್ ಶಾ ಸಂಸದರನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

ಪಟ್ಟಿ:4
ಪ್ರಧಾನಿ ಮೋದಿ ಈಗಾಗಲೇ ಮಂತ್ರಿಯಾಗಲು ಯೋಗ್ಯರಾದವರ ಪಟ್ಟಿಯನ್ನು ತೆಗೆದುಕೊಂಡಿದ್ದಾರೆ. ಎಲ್ಲ ರಾಜ್ಯದ ರಾಜ್ಯಾಧ್ಯಕ್ಷರು ಒಂದು ಪಟ್ಟಿಯನ್ನು ಕಳುಹಿಸಿದ್ದಾರೆ. ಇದರ ಜೊತೆಯಲ್ಲೇ ಆರ್‍ಎಸ್‍ಎಸ್, ರಾಜ್ಯದ ಉಸ್ತುವಾರಿ ಬಳಿಯಿಂದ ಒಂದು ಪಟ್ಟಿಯನ್ನು ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ಮೂರಕ್ಕೂ ಸೇರದೇ ಇರುವ ವ್ಯಕ್ತಿಯೊಬ್ಬರಿಂದ ಅರ್ಹ ಸಂಸದರ ಪಟ್ಟಿಯನ್ನು ತೆಗೆದುಕೊಂಡಿದ್ದಾರೆ. ಒಟ್ಟಾರೆ ಈ ನಾಲ್ಕು ಪಟ್ಟಿಯನ್ನು ಪರಿಗಣಿಸಿ ಜೊತೆ ಸಂಸದರ ಕಾರ್ಯಶೈಲಿ, ಪ್ರೊಫೈಲ್ ಪರಿಶೀಲಿಸಿದ ಬಳಿಕ ಮಂತ್ರಿ ಸ್ಥಾನವನ್ನು ಹಂಚಿಕೆ ಮಾಡಲಾಗುತ್ತದೆ.

ಸ್ಪರ್ಧೆಯಲ್ಲಿರುವ ಸಂಸದರು:
1. ರಮೇಶ್ ಜಿಗಜಿಣಗಿ – ವಿಜಯಪುರ
2. ಸುರೇಶ್ ಅಂಗಡಿ – ಬೆಳಗಾವಿ
3. ಪ್ರಹ್ಲಾದ್ ಜೋಷಿ – ಹುಬ್ಬಳಿ – ಧಾರವಾಡ
4. ಶೋಭಾ ಕರಂದ್ಲಾಜೆ – ಉಡುಪಿ – ಚಿಕ್ಕಮಗಳೂರು
5. ಪಿ ಸಿ ಮೋಹನ್ – ಬೆಂಗಳೂರು ಸೆಂಟ್ರಲ್
6. ಉಮೇಶ್ ಜಾಧವ್ – ಕಲಬುರಗಿ
7. ಭಗವಂತ ಖೂಬಾ – ಬೀದರ್
8. ಸದಾನಂದಗೌಡ, ಬೆಂಗಳೂರು ಉತ್ತರ

ಅಚ್ಚರಿಗಳು ಜಾಸ್ತಿ:
ಮಾಧ್ಯಮಗಳಲ್ಲಿ ಮಂತ್ರಿ ಹಂಚಿಕೆ ಕುರಿತು ಸುದ್ದಿಗಳು ಬರುತ್ತಲೇ ಇರುತ್ತದೆ. ಅದನ್ನು ನೀವು ನಂಬಲು ಹೋಗಬೇಡಿ. ಅಂತಿಮವಾಗಿ ನಾವೇ ಆಯ್ಕೆ ಮಾಡಿ ನಿಮಗೆ ತಿಳಿಸುತ್ತೇವೆ ಎಂದು ಮೋದಿ ಈಗಾಗಲೇ ಎಲ್ಲ ಸಂಸದರಿಗೆ ತಿಳಿಸಿದ್ದಾರೆ.

ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಚ್ಚರಿಯ ನಿರ್ಧಾರಗಳನ್ನು ಪ್ರಕಟಿಸುವುದು ಮೋದಿ ಅವರ ತಂತ್ರಗಾರಿಕೆ. ಕಳೆದ ಬಾರಿ ಕರ್ನಾಟಕದ ಅನಂತ್ ಕುಮಾರ್ ಹೆಗಡೆ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಕಲ್ಪನೆ ಬಿಜೆಪಿ ನಾಯಕರಿಗೆ ಇರಲಿಲ್ಲ. ಸ್ವತಃ ತೇಜಸ್ವಿ ಸೂರ್ಯ ಅವರೇ ಟ್ವೀಟ್ ಮಾಡಿ ನನಗೆ ಅಚ್ಚರಿ ಆಗಿದೆ ಎಂದು ಹೇಳಿದ್ದರು. ಹೀಗಾಗಿ ಈ ಬಾರಿ ಕ್ಯಾಬಿನೆಟ್‍ನಲ್ಲೂ ಅಚ್ಚರಿ ನೀಡುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

Comments

Leave a Reply

Your email address will not be published. Required fields are marked *