ಮೋದಿಯವರೇ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯನವರ ಬಳಿ ಪಾಠ ಕೇಳಿ ತಿಳಿದುಕೊಳ್ಳಿ: ರಾಹುಲ್ ಗಾಂಧಿ

ಬಳ್ಳಾರಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿ, ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ಅವರ ಬಳಿ ಪಾಠ ಕೇಳಿ ತಿಳಿದುಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಹೊಸಪೇಟೆಯ ಕಾಂಗ್ರೆಸ್ ಜನಾರ್ಶೀವಾದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿದ್ದೇನೆ. ಗುಜರಾತ್ ನಲ್ಲಿಯೂ ಪ್ರವಾಸ ಮಾಡಿದ್ದೇನೆ. ಆದರೆ ಪ್ರಧಾನಿಗಳು ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಗುಜರಾತ್ ನಲ್ಲಿನ ಸತ್ಯ ಬೆಳಕಿಗೆ ಬಂದಿದೆ. ಗುಜರಾತ್‍ನಲ್ಲೂ ಸಾಕಷ್ಟು ಸಮಸ್ಯೆಗಳಿವೆ. ರೈತ, ವ್ಯಾಪಾರಿ, ಜನಸಾಮಾನ್ಯರು ಕಷ್ಟಪಟ್ಟು ಗುಜರಾತ್ ಕಟ್ಟಿದ್ದಾರೆ ವಿನಃ ಮೋದಿ ಅವರಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಮೊದಲು ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ನಾವು ಸುಳ್ಳಿನ ಆಶ್ವಾಸನೆ ಕೊಟ್ಟಿಲ್ಲ. ಆದರೆ ಮೋದಿಯವರ ಮಾತು ದಾರಿತಪ್ಪಿಸುತ್ತಿದ್ದಾರೆ. ಹೈದರಾಬಾದ್ ಭಾಗದ ಪ್ರಮುಖ ಬೇಡಿಕೆ ಆಗಿದ್ದ 371ಜೆ ಜಾರಿಗೆ ತಂದು 350 ಕೋಟಿ ರೂ. ನೀಡಿದ್ದೇವೆ. ಆದರೆ ಅಡ್ವಾಣಿಯವರು 371ಜೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಮುಂದಿನ ಬಾರಿ ಅಧಿಕಾರ ಪಡೆದರೆ ಈ ಭಾಗದ ಅಭಿವೃದ್ಧಿಗೆ 4 ಸಾವಿರ ಕೋಟಿ ಮಂಜೂರು ಮಾಡುತ್ತೇವೆ. ಇದುವರೆಗೂ 5 ಸಾವಿರ ವಿದ್ಯಾರ್ಥಿಗಳಿಗೆ ಮೆಡಿಕಲ್, ಎಂಜಿನಿಯರಿಂಗ್ ಪ್ರವೇಶ ಅವಕಾಶ ಲಭಿಸಿದೆ. ಸಾವಿರ ಯುವಕರಿಗೆ ಉದ್ಯೋಗ ಸಿಕ್ಕಿದೆ. ಬೀದರ್, ಕೊಪ್ಪಳ, ಕಲಬುರಗಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭವಾಗಿವೆ. ಇದರಿಂದ ಹೈಕ ಭಾಗದ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದು ಹೇಳಿ ಯುಪಿಎ ಸರ್ಕಾರದ ಸಾಧನೆಯನ್ನು ಹೊಗಳಿದರು.

ನಮ್ಮ ಮುಂದೆ ಕರ್ನಾಟಕ ಚುನಾವಣೆ ಇದೆ. ಜನ ತಮ್ಮ ಭವಿಷ್ಯದ ನಿರ್ಣಯ ಮಾಡಬೇಕಿದೆ. ನೀವು ಯಾವ ಪಕ್ಷದ ಕಡೆ ನಿರ್ಧಾರ ಮಾಡುತ್ತೀರಿ. ಒಂದು ಕಡೆ ಸಿಎಂ ಸಿದ್ದರಾಮಯ್ಯ, ನಾನು, ಪರಮೇಶ್ವರ್ ಇದ್ದರೆ ಮತ್ತೊಂದೆಡೆ ಬಿಜೆಪಿ ನರೇಂದ್ರ ಮೋದಿ, ಯಡಿಯೂರಪ್ಪ ಇದ್ದಾರೆ. ನೀವು ಈಗ ಸತ್ಯ ಹೇಳುವವರ ಮೇಲೆ ನಂಬಿಕೆ ಇಡಬೇಕಿದೆ. ಕಾಂಗ್ರೆಸ್ ಸತ್ಯದ ಪರ. ಬಿಜೆಪಿ ಸುಳ್ಳಿನ ಪರ ಇದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರು ಚುನಾವಣೆ ವೇಳೆ ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಒಂದೇ ಒಂದು ರೂಪಾಯಿ ಖಾತೆಗೆ ಬಂದಿದೆಯಾ? 2 ಕೋಟಿ ಉದ್ಯೋಗ ಸೃಷ್ಟಿ ಎಲ್ಲಿ ಹೋಯಿತು? ದೇಶದಲ್ಲಿ ಸೃಷ್ಟಿಯಾಗಿರುವ ಹೆಚ್ಚಿನ ಉದ್ಯೋಗ ಸಂಖ್ಯೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಕರ್ನಾಟಕದ್ದು. ಇದನ್ನ ಮೋದಿಯವರೇ ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಸೃಷ್ಟಿ ಕೆಲಸ ಮಾಡಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿದೆ. ರೈತರ ಸಮಸ್ಯೆ ಬಿಗಡಾಯಿಸಿದೆ. ಆದಿವಾಸಿ, ದಲಿತರು ಸಮಸ್ಯೆಯಲ್ಲಿದ್ದಾರೆ. ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಒಂದು ಗಂಟೆ ಭಾಷಣದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡಲಿಲ್ಲ. ಯುವಕರ ಉದ್ಯೋಗದ ಬಗ್ಗೆ ಮಾತನಾಡಲಿಲ್ಲ. ರೈತರ ಸಹಾಯದ ಬಗ್ಗೆ ಹೇಳಲಿಲ್ಲ. ಒಂದು ಗಂಟೆ ಭಾಷಣ ನಿರುಪಯುಕ್ತ ಎಂದರು.

ನಿಮ್ಮನ್ನ ಪ್ರಧಾನಿ ಮಾಡಿದ್ದು ದೇಶದ ಭವಿಷ್ಯ ರೂಪಿಸಲು. ನಿಮ್ಮ ಕಥೆ ಕೇಳಲು ಅಲ್ಲ. ಸಿದ್ದರಾಮಯ್ಯನವರ ಗಾಡಿ ಮುಂದೆ ಹೋಗುವುದು. ಹಿಂದಕ್ಕೆ ಹೋಗುವುದಲ್ಲ. ಮೋದಿ ಮುಂದಿನದನ್ನು ನೋಡುತ್ತಿಲ್ಲ. ಹಿಂದಿನದನ್ನು ಕನ್ನಡಿಯಲ್ಲಿ ನೋಡಿ ಗಾಡಿ ಓಡಿಸುತ್ತಿದ್ದಾರೆ. ಈ ರೀತಿ ಗಾಡಿ ಓಡಿಸಿದರೆ ಅಪಘಾತ ಆಗುತ್ತೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನಿಮ್ಮಿಂದ ನಾವು ಮಾತು ಕೇಳೋಕೆ ಪ್ರಧಾನಿ ಮಾಡಿಲ್ಲ. ನೋಟ್ ಬ್ಯಾನ್ ಮೂಲಕ ಕೆಟ್ಟ ತೀರ್ಮಾನ ತೆಗೆದುಕೊಂಡಿದ್ದೀರ. ಅಲ್ಪಸಂಖ್ಯಾತರ ಬಗ್ಗೆ ಅವಹೇಳನ ಮಾಡಿದ್ದೀರಿ. ಜಿಎಸ್‍ಟಿ ಬದಲಾಯಿಸಿ ಗಬ್ಬರ್ ಸಿಂಗ್ ಟ್ಯಾಕ್ಸ್ ರೀತಿ ಪರಿವರ್ತಿಸಿದ್ದರಿಂದ ಚಿಕ್ಕ ಚಿಕ್ಕ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಿಡಿಕಾರಿದರು.

ಗುಜರಾತ್ ನಲ್ಲಿ ಟಾಟಾ ಸಂಸ್ಥೆ ಪ್ರಾರಂಭವಾಗಿದೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ಕಾರು ತಯಾರಾಗಿಲ್ಲ. 33 ಸಾವಿರ ಕೋಟಿ ನ್ಯಾನೋಗೆ ಕಂಪೆನಿಗೆ ಮೋದಿ ನೀಡಿದ್ದರು. ನ್ಯಾನೋ ಕಾರು ಎಲ್ಲೂ ಕಾಣಿಸುತ್ತಿಲ್ಲ. ಒಬ್ಬ ಉದ್ಯಮಿಗೆ 40 ಸಾವಿರ ಹೆಕ್ಟೆರ್ ಜಮೀನನ್ನು ಕೇವಲ ಒಂದು ರೂಪಾಯಿಗೆ ಮಾರಾಟ ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತೆ. ಆದರೆ ನಾವು ಉದ್ಯೋಗ ಖಾತರಿಯಂತಹ ಯೋಜನೆ ಜಾರಿ ಮಾಡಿ ಬಡವರಿಗೂ ಉದ್ಯೋಗ ನೀಡಿದ್ದೇವು ಎಂದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಮರೆತಿದ್ದಾರೆ. ಇಡೀ ವಿಶ್ವದ ಭ್ರಷ್ಟಾಚಾರದ ದಾಖಲೆಯನ್ನು ಹಿಂದಿನ ಬಿಜೆಪಿ ಸರಕಾರ ಮುರಿದಿದೆ. ಯಡಿಯೂರಪ್ಪರನ್ನು ಬಿಜೆಪಿಯವರೇ ತೆಗೆದು ಹಾಕಿದ್ದರು. ರಾಫೇಲ್ ಖರೀದಿ ಹಗರಣ ದೇಶದ ದೊಡ್ಡ ಹಗರಣವಾಗಿದ್ದು ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಫ್ರಾನ್ಸಿಗೆ ತೆರಳಿದ್ದ ಪ್ರಧಾನಿ ಮೋದಿ ಖುದ್ದು ರಾಫೇಲ್ ವಿಮಾನ ಖರೀದಿಯ ಒಪ್ಪಂದ ಬದಲಾಯಿಸಿದರು. ನಾವು ಇದ್ದಾಗ ರಾಫೇಲ್ ವಿಮಾನದ ಖರೀದಿಗೆ ಎಚ್‍ಎಎಲ್ ಸಂಸ್ಥೆ ಜೊತೆ ಒಪ್ಪಂದ ನಡೆಸಿದ್ದೆವು. ದೇಶದಲ್ಲಿ ಎಚ್‍ಎಎಲ್ ನಂಬಿಕಸ್ಥ ಸಂಸ್ಥೆ. ಬೆಂಗಳೂರಿನ ಅಭಿವೃದ್ಧಿಗೆ ಎಚ್‍ಎಎಲ್ ಸಹ ಕಾರಣ. ಮೋದಿ ಎಚ್‍ಎಎಲ್ ಒಪ್ಪಂದವನ್ನು ತಮ್ಮ ಮಿತ್ರರಿಗೆ ನೀಡಿದ್ದಾರೆ. ಯಾವ ಆಧಾರದಲ್ಲಿ ಮೋದಿಯವರು ಈ ಒಪ್ಪಂದ ನೀಡಿದ್ದಾರೆ. ನಿಮ್ಮ ಮಿತ್ರರಿಗೆ ಸಹಾಯ ಮಾಡಲು ಈ ಒಪ್ಪಂದ ನೀಡಿದ್ದೀರಾ? ಬಿಜೆಪಿ ಸಮಯದಲ್ಲಿ ಇದ್ದ ಹಗರಣಗಳ ಬಗ್ಗೆ ಮಾತನಾಡಲಿಲ್ಲ ಏಕೆ? ಮೆಡಿಕಲ್ ಹಗರಣ, ರೇಪ್ ಹಗರಣ, ಭೂ ಹಗರಣ, ಗಣಿ ಹಗರಣ ಬಗ್ಗೆ ಮಾತನಾಡಿಲ್ಲ. ನಮ್ಮ ಸರ್ಕಾರದ ಮೇಲೆ ಒಂದೇ ಒಂದು ಹಗರಣದ ಆರೋಪವಿಲ್ಲ ಎಂದರು.

ಪ್ರಧಾನಿ ಮೋದಿ ಅವರು ಇಡೀ ದೇಶದಲ್ಲಿ ದಲಿತರು, ಆದಿವಾಸಿಗಳಿಗೆ 55 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 27 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇನ್ನಷ್ಟು ಹೆಚ್ಚಿನ ಕೆಲಸ ಮಾಡುತ್ತೇವೆ. ನಾವು ಯಾವತ್ತೂ ನಾವೊಬ್ಬರೇ ಮಾಡಿದ್ದೇವೆಂದು ಹೇಳಿಕೊಳ್ಳುವುದಿಲ್ಲ. ರಾಜ್ಯದ ಪ್ರಗತಿ ಪಥದಲ್ಲಿ ಸಾಗುತ್ತಿದೆ. ರಾಜ್ಯದ ಪ್ರಗತಿಗೆ ಅನೇಕ ಮಹಿಳೆಯರು, ರೈತರು, ವ್ಯಾಪಾರಿಗಳ ಕೊಡುಗೆಯಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *