ಮಹಿಳೆಯ ಮಾತು ಕೇಳಿ ಭಾವುಕರಾದ ಮೋದಿ

ನವದೆಹಲಿ: ಮಹಿಳೆಯೊಬ್ಬರ ಮಾತು ಕೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿಯೇ ಭಾವುಕರಾಗಿದ್ದಾರೆ.

ಇಂದು ಮೋದಿ ಜನೌಷಧಿ ಕೇಂದ್ರಗಳ ಮಾಲೀಕರು ಮತ್ತು ಪ್ರಧಾನ್ ಮಂತ್ರಿ ಭಾರತೀಯ ಜನೌಶಧಿ ಪರಿಯೋಜನ (ಪಿಎಂಬಿಜೆಪಿ) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮಹಿಳೆ ದೀಪಾ ಶಾ, ನಾನು ದೇವರನ್ನು ನೋಡಿಲ್ಲ. ಆದರೆ ನಿಮ್ಮಲ್ಲಿ ದೇವರನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಮೋದಿ ಒಂದು ಕ್ಷಣ ಭಾವುಕರಾದರು.

ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ದೀಪಾ ಶಾ, ನಾನು 2011 ರಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೆ. ವೈದ್ಯರು ನೀವು ಗುಣವಾಗಲ್ಲ ಎಂದು ಹೇಳಿದ್ದರು. ಆದರೆ ನಾನು ಜನೌಷಧಿ ಕೇಂದ್ರದಿಂದ ಕಡಿಮೆ ಬೆಲೆಗೆ ಮಾತ್ರೆಗಳನ್ನು ತೆಗೆದುಕೊಂಡು ಸೇವಿಸಿ ಈಗ ಗುಣವಾಗಿದ್ದೇನೆ. ಜೊತೆಗೆ ತಿಂಗಳಿಗೆ 3,500 ರೂ. ಹಣವನ್ನು ಉಳಿಸಿಕೊಳ್ಳುತ್ತಿದ್ದೇನೆ. ಈ ಹಣ ನನ್ನ ಊಟದ ಮತ್ತು ತಿಂಗಳ ಬಳಕೆಗೆ ಖರ್ಚು ಮಾಡುತ್ತೇನೆ ಎಂದರು.

ಜೊತೆಗೆ ನನಗೆ ಎಲ್ಲರೂ ಸಹಾಯ ಮಾಡಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಯೂ ಕೂಡ ಸಹಾಯ ಮಾಡಿದ್ದಾರೆ. ನಾನು ಯಾವತ್ತು ಶಿವನನ್ನು ನೋಡಿಲ್ಲ. ಆದರೆ ನಿಮ್ಮನ್ನು ನೋಡಿದಾಗ ನನಗೆ ನಿಮ್ಮಲ್ಲಿ ಶಿವ ಕಾಣುತ್ತಾನೆ ಎಂದು ಹೇಳಿ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ದೀಪಾ ಶಾ ಅಳುವುದನ್ನು ಕಂಡ ಮೋದಿ ಅವರು ಕೂಡ ಕಣ್ಣೀರು ಹಾಕಿದ್ದಾರೆ.

ಇದಾದ ನಂತರ ಮಾತನಾಡಿದ ಮೋದಿ ಅವರು, ನೀವು ನಿಮ್ಮ ಇಚ್ಛಾಶಕ್ತಿಯಿಂದ ನಿಮ್ಮ ರೋಗವನ್ನು ಸೋಲಿಸಿದ್ದೀರಾ. ನಿಮ್ಮ ಧೈರ್ಯ ನಿಮ್ಮ ದೇವರು, ಆ ಧೈರ್ಯವೇ ನಿಮ್ಮನ್ನು ರೋಗದಿಂದ ಹೋರಬರುವ ಶಕ್ತಿ ನೀಡಿದೆ. ನಿಮ್ಮಲ್ಲಿರುವ ಈ ವಿಶ್ವಾಸ ಹೀಗೆ ಇರಲಿ ಎಂದು ವಿಡಿಯೋ ಕಾನ್ಫರೆನ್ಸ್ ಅಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮೋದಿ, ಕೊರೊನಾ ವೈರಸ್ ವದಂತಿಯಿಂದ ದೂರ ಇರುವಂತೆ ನನ್ನ ದೇಶದ ಜನರಲ್ಲಿ ಮನವಿ ಮಾಡುತ್ತೇನೆ. ಕೊರೊನಾ ಈ ನಿಟ್ಟಿನಲ್ಲಿ ನಾವು ವೈದ್ಯರ ಸಲಹೆಯನ್ನು ಪಾಲಿಸಬೇಕಾಗಿದೆ ಎಂದು ಕರೆ ಕೊಟ್ಟರು. ನಾವು ನಮಸ್ಕಾರ ಎಂದು ಶುಭಾಶಯ ಕೋರುವುದನ್ನು ಕೆಲವು ಕಾರಣಗಳಿಂದ ಮರೆತ್ತಿದ್ದೇವೆ. ಆದರೆ ಇಂದು ಇಡೀ ಪ್ರಪಂಚವೇ ನಮಸ್ಕಾರ ಮಾಡಿ ಆಹ್ವಾನಿಸುವುದನ್ನು ಮಾಡುತ್ತಿದೆ. ನಮಗೆ ಇದೇ ಸರಿಯಾದ ಸಮಯ ಹ್ಯಾಂಡ್‍ಶೇಕ್ ಮಾಡುವ ಬದಲು ನಮಸ್ಕಾರ ಮಾಡುವ ಅಭ್ಯಾಸವನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.

ಪ್ರತಿ ತಿಂಗಳು, ಒಂದು ಕೋಟಿ ಕುಟುಂಬಗಳು ಈ ಜನೌಷಧಿ ಕೇಂದ್ರಗಳಿಂದ ಅಗ್ಗದ ಔಷಧಿಗಳ ಲಾಭವನ್ನು ಪಡೆಯುತ್ತಿವೆ. ದೇಶಾದ್ಯಂತ 6,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಜನರಿಗೆ 2,000-2,500 ಕೋಟಿ ರೂ. ಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

Comments

Leave a Reply

Your email address will not be published. Required fields are marked *