My Dear Friend – ಟ್ರಂಪ್‌ ಜೊತೆಗೆ ಮೋದಿ ದೂರವಾಣಿ ಸಂಭಾಷಣೆ

ನವದೆಹಲಿ/ವಾಷಿಂಗ್ಟನ್‌: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ (Narendra Modi) ಮೊದಲಬಾರಿಗೆ ಟ್ರಂಪ್‌ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಅಧ್ಯಕ್ಷ ಗಾದಿಗೆ ಏರಿದ ಟ್ರಂಪ್‌ ಅವರಿಗೆ ಶುಭ ಕೋರಿದ್ದಾರೆ. ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌ (Donald Trump), ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ಮಾಹಿತಿಯನ್ನು ಪ್ರಧಾನಿ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʻನನ್ನ ಆತ್ಮೀಯ ಸ್ನೇಹಿತ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಂತೋಷವಾಯಿತು. ಟ್ರಂಪ್‌ ಅವರ ಐತಿಹಾಸಿಕ 2ನೇ ಅವಧಿಗೆ ಅಭಿನಂದನೆ ಸಲ್ಲಿಸಿದ್ದು, ಭಾರತ-ಅಮೆರಿಕ ನಡುವಿನ ಪರಸ್ಪರ ಲಾಭದಾಯಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಬದ್ಧತೆಯನ್ನು ಪುನರುಚ್ಛಿಸಿದ್ದೇನೆ. ನಮ್ಮ ಜನರ ಕಲ್ಯಾಣಕ್ಕಾಗಿ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆʼ ಎಂದು ಹೇಳಿದ್ದಾರೆ.

ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧವು ಐತಿಹಾಸಿಕ ಘಟ್ಟ ತಲುಪಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದ ಮೂಲಕ ಒಟ್ಟಿಗೆ ಹೆಜ್ಜೆ ಹಾಕುತ್ತಿವೆ. ನಮ್ಮ ಸಂಬಂಧ ಜಾಗತಿಕ ಒಳಿತಿಗಾಗಿ ಅತ್ಯಂತ ಮಹತ್ವದ್ದಾಗಿದೆ ಎಂದೂ ಸಹ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಪ್ರಧಾನಿ ಮೋದಿ ಅವರ ಫೋನ್‌ ಕರೆಗೆ ಧನ್ಯವಾದ ಅರ್ಪಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ತಮ್ಮ ಭೇಟಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳು ಜಾಗತಿಕ ಪರಿಣಾಮ ಬೀರುತ್ತಿದ್ದು, ಉತ್ತಮ ಜಗತ್ತಿನ ನಿರ್ಮಾಣದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಟ್ರಂಪ್‌ ಹೇಳಿದ್ದಾರೆ.