ಮೋದಿ ನಿತ್ಯ 3.5 ಗಂಟೆ ನಿದ್ದೆ, ಸಂಜೆ 6 ಗಂಟೆಯ ನಂತರ ಊಟ ಮಾಡಲ್ಲ

– ಸಂಸದರ ಜೊತೆ ಊಟ ಮಾಡಿ ಅಚ್ಚರಿ ಮೂಡಿಸಿದ ಪ್ರಧಾನಿ

ನವದೆಹಲಿ: ಬಜೆಟ್ ಅಧಿವೇಶನದ (Budget Session) ಸಮಯದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಸತ್‌ ಸದಸ್ಯರ ಜೊತೆ ಊಟ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿ ಸಂಸದರಾದ ಹೀನಾ ಗವೈತ್‌, ಎಸ್‌.ಫಾಂಗ್ನಾನ್‌ ಕೋನ್ಯಾಕ್‌, ಜಮ್ಯಾಂಗ್‌ ತ್ಸೇರಿಂಗ್‌ ನಮ್ಗಾಲ್‌, ಎಲ್‌ ಮುರುಗನ್‌ ಹಾಗೂ ಟಿಡಿಪಿ ಸಂಸದ ರಾಮ ಮೋಹನ್‌ ರಾಯ್ಡು, ಬಿಎಸ್‌ಪಿ ಸಂಸದ ರಿತೇಶ್‌ ಪಾಂಡೆ, ಬಿಜೆಡಿ ಸಂಸದರಾದ ಸಸ್ಮಿತ್‌ ಪಾತ್ರಾ ಅವರಿಗೆ ಮೋದಿ ಕರೆ ಮಾಡಿ ನಾನು ನಿಮ್ಮನ್ನು ಭೇಟಿಯಾಗಬೇಕೆಂದಿದ್ದೇನೆ ಎಂದು ಹೇಳಿದ್ದಾರೆ.

ಕರೆ ಬಂದ ನಂತರ ಮಧ್ಯಾಹ್ನ 2:30ಕ್ಕೆ ಚಲಿಯೇ, ಆಪ್ಕೋ ಏಕ್ ಶಿಕ್ಷೆ ದೇನಾ ಹೈ’ (ಬನ್ನಿ.. ನಿಮಗೆ ಶಿಕ್ಷೆ ಕೊಡಬೇಕು) ಎಂದು ಹೇಳಿ ಖುದ್ದು ಪ್ರಧಾನಿ ಅವರೇ ಸಂಸತ್ತಿನ ಕ್ಯಾಂಟೀನ್‌ಗೆ ಅವರನ್ನು ಕರೆದೊಯ್ದು ಜೊತೆಯಾಗಿ ಭೋಜನ ಮಾಡಿದ್ದಾರೆ. ಈ ವೇಳೆ ಮೋದಿ ಅವರು ತಮ್ಮ ವಿದೇಶ ಪ್ರವಾಸಗಳು, ಆಹಾರ, ದಿನಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮೋದಿ ಜೊತೆ ಭೋಜನ ಸವಿದ ಬಿಜೆಪಿ ಸಂಸದ ಎಲ್‌ ಮುರುಗನ್‌ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಾವು ಮೋದಿ ಅವರೊಂದಿಗೆ 45 ನಿಮಿಷ ಕಳೆದೆವು. ನಾವು ಅವರಿಂದ ಅನೇಕ ಸ್ಪೂರ್ತಿದಾಯಕ ವಿಷಯಗಳನ್ನು ಕಲಿತಿದ್ದೇವೆ. ಪ್ರಧಾನಿ ಪ್ರತಿ ದಿನ 3.5 ಗಂಟೆ ನಿದ್ದೆ, ಸಂಜೆ 6 ಗಂಟೆಯ ನಂತರ ಊಟ ಮಾಡುವುದಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಮತ್ತು ಸಂಸದರು ಕ್ಯಾಂಟೀನ್‌ನಲ್ಲಿ ಸಸ್ಯಾಹಾರಿ ಊಟ ಮತ್ತು ರಾಗಿ ಲಾಡು ಸವಿದರು.  ಭೋಜನ ಮಾಡಿದ ಬಳಿಕ ಪ್ರಧಾನಿ ಮೋದಿ ಅವರೇ ಬಿಲ್ ಪಾವತಿಸಿದರು ಎಂದು ಮುರುಗನ್ ತಿಳಿಸಿದರು. ಸಂಸತ್ತಿನ ಬಜೆಟ್‌ ಅಧಿವೇಶನ ಶನಿವಾರ ಕೊನೆಗೊಳ್ಳಲಿದೆ.