ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ: ವಿಶೇಷತೆ ಏನು? ಇಲ್ಲಿದೆ ಪೂರ್ಣ ಮಾಹಿತಿ

ಅಬುದಾಬಿ: ಪಶ್ಚಿಮ ಏಷ್ಯಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಅಬುದಾಬಿಯಲ್ಲಿ ಮೊದಲ ಬಾರಿಗೆ ಹಿಂದೂ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ 2015ರ ನಂತರ ಎರಡನೇ ಬಾರಿಗೆ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ದುಬೈನ ಒಪೇರಾ ಹೌಸ್ ನಲ್ಲಿ ಭಾರತೀಯ ಸಮುದಾಯಗಳೊಂದಿಗೆ ನರೇಂದ್ರಮೋದಿ ಮಾತುಕತೆ ನಡೆಸಿದ್ದು, ವಿವಿಧ ವೃತ್ತಿಪರ ಹಾಗೂ ಸಂಘಟನೆಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರಮೋದಿ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಸುಮಾರು 30 ಲಕ್ಷ ಭಾರತೀಯರಿಗೆ ಮನೆಯ ವಾತಾವರಣ ನಿರ್ಮಿಸಿಕೊಟ್ಟ ಅರಬ್ ದೇಶಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅದ್ಭುತ ದೇವಸ್ಥಾನ ನಿರ್ಮಾಣ ಮಾಡಲು ಅನುಮತಿ ನೀಡಿದ್ದಕ್ಕೆ ನಾನು 125 ಕೋಟಿ ಭಾರತೀಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

55 ಸಾವಿರ ಚದರ ಮೀಟರ್ ವಿಸ್ತೀರ್ಣ ಜಾಗದಲ್ಲಿ ಅಬುದಾಬಿಯಲ್ಲಿ ಸ್ವಾಮೀ ನಾರಾಯಣ ದೇವಾಲಯ ನಿರ್ಮಾಣವಾಗಲಿದೆ. ಶಂಕುಸ್ಥಾಪನೆ ಸಮಾರಂಭ ಐತಿಹಾಸಿಕವಾದದ್ದು, ಅದನ್ನು ಪ್ರಧಾನಿ ಮೋದಿ ಅವರು ನೆರವೇರಿಸಿದ್ದಾರೆ ಎಂದು ಯುಎಇನ ಭಾರತೀಯ ರಾಯಬಾರಿ ನವ್ ದೀಪ್ ಸಿಂಗ್ ಸೂರಿ ತಿಳಿಸಿದ್ದಾರೆ.

ಭಾರತೀಯ ಮೂಲದ ಮೂವತ್ತು ಲಕ್ಷ ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ದುಬೈ- ಅಬುದಾಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುವೆ ಸುಮಾರು 14 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ದೇವಾಲಯದ ನಿರ್ಮಾಣ ಕಾರ್ಯ 2020ರ ವೇಳೆಗೆ ಪೂರ್ಣವಾಗಲಿದೆ. ಪ್ರಾರ್ಥನಾ ಮಂದಿರ, ಅಧ್ಯಯನ ಕೊಠಡಿ, ಮಕ್ಕಳಿಗಾಗಿ ಕ್ರೀಡಾಂಗಣ, ಉದ್ಯಾನವನ, ನೀರಿನ ಕಾರಂಜಿ, ಆಹಾರ ಮಳಿಗೆ, ಪುಸ್ತಕ ಮತ್ತು ಉಡುಗೊರೆ ನೀಡಲು ಮಳಿಗೆಗಳು ಈ ದೇವಾಲಯದ ಜಾಗದಲ್ಲಿ ಇರಲಿದೆ.

ಇದೇ ಸಂದರ್ಭದಲ್ಲಿ ವಿಶ್ವಬ್ಯಾಂಕ್ ಸುಲಭ ವ್ಯವಹಾರ ನಡೆಸುವ ದೇಶಗಳ ಪಟ್ಟಿಯಲ್ಲಿ 142ನೇ ಸ್ಥಾನದಿಂದ 100ನೇ ಶ್ರೇಯಾಂಕಕ್ಕೆ ಭಾರತ ಜಿಗಿದಿದೆ. ಆದರೆ ನಾವು ಇಷ್ಟಕ್ಕೆ ತೃಪ್ತರಾಗಿಲ್ಲ. ನಾವು ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಬಯಸಿದ್ದೇವೆ. ಇದನ್ನು ಸಾಧಿಸಲು ಬೇಕಾಗಿದ್ದನ್ನೆಲ್ಲಾ ನಾವು ಮಾಡಲಿದ್ದೇವೆ ಎಂದು ಮೋದಿ ಭರವಸೆ ನೀಡಿದರು.

ಬೊಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್) ಈ ದೇವಾಲಯದ ಆಡಳಿತವನ್ನು ನೋಡಿಕೊಳ್ಳಲಿದೆ. ಈ ಸಂಸ್ಥೆ ಈಗಾಗಲೇ ಇಂಗ್ಲೆಂಡ್, ಅಮೆರಿಕ, ಆಸ್ಟ್ರೆಲೀಯಾ, ಆಫ್ರಿಕ ಮತ್ತು ಕೆನಡಾ ಸೇರಿದಂತೆ 1200 ದೇವಾಲಯಗಳನ್ನು ನಿರ್ಮಾಣ ಮಾಡಿದೆ. ಗುಜರಾತ್ ರಾಜಧಾನಿಯಾದ ಗಾಂಧಿನಗರದಲ್ಲಿ ಮತ್ತು ದೆಹಲಿಯಲ್ಲಿ ಬಿಎಪಿಎಸ್ ಅಕ್ಷರಾಧಾಮ ದೇವಾಲಯವನ್ನು ನಿರ್ಮಿಸಿದ್ದು, ಅಮೆರಿಕದ ನ್ಯೂಜೆರ್ಸಿಯಲ್ಲೂ ದೇವಾಲಯ ನಿರ್ಮಾಣವಾಗುತ್ತಿದೆ.

Comments

Leave a Reply

Your email address will not be published. Required fields are marked *