ಲಾಕ್‍ಡೌನ್ ವಿಸ್ತರಣೆ – ವಿಪಕ್ಷಗಳ ಜೊತೆ ಮೋದಿ ಸಭೆ

– ಏಪ್ರಿಲ್ 11ಕ್ಕೆ ನಿರ್ಣಾಯಕ ಸಭೆ

ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನಲೆ ಭಾರತ ಲಾಕ್‍ಡೌನ್ ಮಾಡಲಾಗಿದ್ದು, ಇದನ್ನು ಮುಂದುವರಿಸುವ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಜೊತೆ ಸಭೆ ನಡೆಸಿದ್ದಾರೆ.

ದೆಹಲಿಯ ಲೋಕ ಕಲ್ಯಾಣ್ ಮಾರ್ಗ್‍ನಲ್ಲಿರುವ ತಮ್ಮ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ, ಲೋಕಸಭಾ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕರು ಹಾಗೂ ಸಂಸದೀಯ ನಾಯಕರ ಜೊತೆ ಚರ್ಚೆ ನಡೆಸಿದರು.

ಸಭೆಯಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಲಾಕ್‍ಡೌನ್ ಮುಂದುವರಿಸುವ ಮತ್ತು ನಿಯಮಗಳನ್ನು ಸಡಿಲಿಕೆ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಹಲವು ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದಲ್ಲದೇ ಲಾಕ್‍ಡೌನ್ ಹಿನ್ನೆಲೆ ದೇಶದ ಆರ್ಥಿಕತೆ ಮೇಲಾಗಿರುವ ಪರಿಣಾಮದ ಬಗ್ಗೆ ಮೋದಿ ಅವರು ವಿವರಿಸಿದ್ದು, ಈ ವೇಳೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೂಡ ಎಲ್ಲಾ ನಾಯಕರಿಗೆ ತಿಳಿಸಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಜನರ ನೆರವಿಗೆ ಸರ್ಕಾರ ಘೋಷಿಸಿರುವ ಪ್ಯಾಕೇಜ್, ಸಹಾಯದ ಬಗ್ಗೆ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ. ಇದಲ್ಲದೇ ಲಾಕ್‍ಡೌನ್ ಮುಂದುವರಿದರೆ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಮೋದಿ ಅವರು ಮನವಿಗೆ ಹಲವು ಸಂಸದೀಯ ನಾಯಕರು ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯವಾರು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪಿಪಿಇ ಕಿಟ್‍ಗಳು, ಮಾಸ್ಕ್, ಹ್ಯಾಂಡ್ ಗ್ಲೋಸ್ ಹಾಗೂ ವೆಂಟಿಲೇಟರ್ ಗಳನ್ನು ಪೂರೈಕೆ ಮಾಡುವಂತೆ ನಾಯಕರು ಮನವಿ ಮಾಡಿದ್ದು, ಇದಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಮೋದಿ ಅವರು ನೀಡಿದ್ದಾರೆ.

https://twitter.com/ANI/status/1247776117710147584

ಏಪ್ರಿಲ್ 11ಕ್ಕೆ ಸಿಎಂಗಳ ಸಭೆ:
ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಭೆ ನಡೆಸಲಿದ್ದಾರೆ. ಏಪ್ರಿಲ್ 11ಕ್ಕೆ ಈ ಸಭೆ ನಡೆಯಲಿದ್ದು, ಈ ವೇಳೆ ಎಲ್ಲಾ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆಯಲಿದ್ದಾರೆ. ಈಗಾಗಲೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಜಾರ್ಖಂಡ್, ಪುದುಚೇರಿ ಸೇರಿ 8 ರಾಜ್ಯಗಳು ಲಾಕ್‍ಡೌನ್ ವಿಸ್ತರಣೆಗೆ ಆಸಕ್ತಿ ತೋರಿದ್ದು ಉಳಿದ ರಾಜ್ಯಗಳ ಅಭಿಪ್ರಾಯವನ್ನು ಮೋದಿ ಅವರು ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

Comments

Leave a Reply

Your email address will not be published. Required fields are marked *