ಸಾಂಪ್ರದಾಯಿಕ ಸ್ವಾಗತ ಕೊಟ್ಟು ಮೋದಿಯನ್ನು ʻಬಾಸ್‌ʼ ಎಂದು ಕರೆದ ಆಸ್ಟ್ರೇಲಿಯಾ ಪ್ರಧಾನಿ

– ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಸದೃಢ ದೇಶ
– ವಿಶ್ವದ ಅತ್ಯಂತ ಜನಪ್ರಿಯ ದೇಶವೂ ಹೌದು – ಆಲ್ಬನೀಸ್ ಮೆಚ್ಚುಗೆ
– ಯೋಗ ಕೂಡ ನಮ್ಮನ್ನು ಬೆಸೆದಿದೆ ಎಂದ ಮೋದಿ

ಕ್ಯಾನ್ಬೆರಾ: ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ (Australia) ಬುಡಕಟ್ಟು ಸಂಪ್ರದಾಯದಂತೆ ಭವ್ಯ ಸ್ವಾಗತ ಸ್ವೀಕರಿಸಿದರು.

ನಂತರ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಮಾಸ್ಟರ್ ಶೆಫ್ ಹಾಗೂ ಕ್ರಿಕೆಟ್’, ಭಾರತ ಮತ್ತು ಆಸ್ಟ್ರೇಲಿಯಾ (Australia) ನಡುವಿನ ಸಂಬಂಧವನ್ನ ಒಗ್ಗೂಡಿಸಿವೆ. ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಕೊಡುಗೆ ನೀಡಿರುವ ಭಾರತೀಯ ಸಮುದಾಯಕ್ಕೆ (Indian Community) ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಷ್ಟಾಚಾರಕ್ಕೆ ಗುಡ್‌ಬೈ – ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತ ಕೋರಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ

ನಮ್ಮ ಜೀವನಶೈಲಿ ವಿಭಿನ್ನ ಇರಬಹುದು. ಆದರೆ ಯೋಗ ಕೂಡ ನಮ್ಮನ್ನು ಬೆಸೆದಿದೆ. ನಾವು ಕ್ರಿಕೆಟ್ ಮೂಲಕ ಸುದೀರ್ಘ ಸಮಯದಿಂದ ಸಂಪರ್ಕಿತರಾಗಿದ್ದೇವೆ. ಆದರೆ ಈಗ ಟೆನ್ನಿಸ್ ಮತ್ತು ಸಿನಿಮಾಗಳೂ ನಮ್ಮನ್ನ ಬೆಸೆಯುತ್ತಿವೆ. ನಾವು ವಿಭಿನ್ನ ರೀತಿಯಲ್ಲಿ ಅಡುಗೆಗಳನ್ನು ಮಾಡಬಹುದು, ಆದರೆ ಮಾಸ್ಟರ್‌ಶೆಫ್ ನಮ್ಮನ್ನು ಈಗ ಒಂದುಗೂಡಿಸುತ್ತಿದೆ ಎಂದಿದ್ದಾರೆ.  

ಮುಖ್ಯವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧವು 3C, 3D ಮತ್ತು 3E ಗಳಿಂದ ಕೂಡಿದೆ. 3C ಅಂದರೆ ಕಾಮನ್‌ವೆಲ್ತ್, ಕ್ರಿಕೆಟ್ ಮತ್ತು ಕರ್ರಿ, 3Dಗಳು ಡೆಮಾಕ್ರಸಿ, ಡಯಾಸ್ಪೊರಾ ಹಾಗೂ ದೋಸ್ತಿ ಮತ್ತು 3E ಗಳು- ಎನೆರ್ಜಿ, ಎಕಾನಮಿ ಹಾಗೂ ಎಜುಕೇಷನ್‌ನ ಆಚೆ ಬೆಳೆದಿದೆ. ಇದು ಪರಸ್ಪರ ವಿಶ್ವಾಸ ಮತ್ತು ಪರಸ್ಪರ ಗೌರವದೊಂದಿಗೆ ನಡೆಯುತ್ತಿದೆ. ಭಾರತ ವಿಶ್ವದ ಆರ್ಥಿಕ ಸದೃಢ ರಾಷ್ಟ್ರಗಳಲ್ಲಿ ಒಂದಾಗಿದ್ದು, ಐಎಂಎಫ್ ಸಹ ಭಾರತವನ್ನ ಜಾಗತಿಕ ಆರ್ಥಿಕತೆಯಲ್ಲಿ ಉಜ್ವಲ ರಾಷ್ಟ್ರವಾಗಿ ಪರಿಗಣಿಸಿದೆ ಎಂದು ಹಾಡಿಹೊಗಳಿದ್ದಾರೆ.

ಇದಕ್ಕೂ ಮುನ್ನ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್, ಮೋದಿ ಅವರನ್ನ ‘ದಿ ಬಾಸ್’ ಕರೆದಿದ್ದಾರೆ. ಭಾರತೀಯ ಸಮುದಾಯದ ಜೊತೆ ಸಿಡ್ನಿಯಲ್ಲಿ ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಅವರು ಮೋದಿ ಅವರನ್ನ ಕೊಂಡಾಡಿದ್ದಾರೆ. ಇದನ್ನೂ ಓದಿ: ರಷ್ಯಾ ಯುದ್ಧ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್‌ ಅಧ್ಯಕ್ಷ ಭೇಟಿಯಾದ ಮೋದಿ

ನಾನು ಕೊನೆಯ ಬಾರಿ ಈ ವೇದಿಕೆಯಲ್ಲಿ ಯಾರನ್ನಾದರೂ ನೋಡಿದ್ದು ಅಂದ್ರೆ ಬ್ರೂಸ್ ಸ್ಪ್ರಿಂಗ್‌ಸ್ಟೀನ್, ಆದ್ರೆ ಅವರಿಗೂ ಸಹ ಪ್ರಧಾನಿ ಮೋದಿಗೆ ಸಿಕ್ಕ ಸ್ವಾಗತ ಸಿಕ್ಕಿರಲಿಲ್ಲ, ಪ್ರಧಾನಿ ಮೋದಿ ಬಾಸ್ ಎಂದು ಬಣ್ಣಿಸಿದ್ದಾರೆ.

ಇಂದಿಗೆ ನಾನು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ವರ್ಷ ಕಳೆದಿದ್ದು, ನಾವು ಒಟ್ಟಿಗೆ ನಡೆಸುತ್ತಿರುವ 6ನೇ ಸಭೆಯಾಗಿದೆ. ಇದು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸಿದೆ ಎಂಬುದನ್ನು ತೋರಿಸುತ್ತದೆ. ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಸದೃಢ ದೇಶವಾಗಿ ಬೆಳೆಯುತ್ತಿದೆ. ಈಗಾಗಲೇ ವಿಶ್ವದ ಅತ್ಯಂತ ಜನಪ್ರಿಯ ದೇಶವೂ ಆಗಿದೆ. ಅದಕ್ಕಾಗಿ ನಾವು ಹೂಡಿಕೆ ಸಂಪರ್ಕ ಬೆಳೆಸಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಭಾರತೀಯ ನೃತ್ಯಪಟುಗಳಿಂದ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಧಾನಿ ಮೋದಿ ಅವರಿಗೂ ಮುನ್ನ ಮಾತನಾಡಿದ ಆಲ್ಬನೀಸ್, ಅದಕ್ಕೂ ಮುನ್ನ ಆಯೋಜಿಸಿದ್ದ ದ್ವಿಪಕ್ಷೀಯ ಸಭೆ ಕುರಿತು ಮಾಹಿತಿ ನೀಡಿದರು.