ಇಂದಿನಿಂದ ನಾಲ್ಕು ದಿನ ಪ್ರಧಾನಿ ಮೋದಿ ವಿದೇಶ ಪ್ರವಾಸ; ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

– ವಾಣಿಜ್ಯ ಒಪ್ಪಂದ, ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದಿನಿಂದ ಜುಲೈ 26 ರವರೆಗೆ ವಿದೇಶ ಪ್ರವಾಸದಲ್ಲಿರಲಿದ್ದಾರೆ. ಈ ಬಾರಿ ಬ್ರಿಟನ್ (Britain) ಮತ್ತು ಮಾಲ್ಡೀವ್ಸ್‌ಗೆ (Maldives) ಭೇಟಿ ನೀಡಲಿದ್ದು, ಭೇಟಿಯಲ್ಲಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸ್ವರೂಪ ನೀಡುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಪ್ರಮುಖ ಗುರಿಯಾಗಿದೆ.

ಇಂದು ಮತ್ತು ನಾಳೆ ಪ್ರಧಾನಿ ಮೋದಿ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯಲ್ಲಿ ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ (ಎಫ್‌ಟಿಎ) ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ. ಮೂರು ವರ್ಷಗಳ ಚರ್ಚೆಯ ಬಳಿಕ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99 ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ. ಇದರಿಂದ ಬ್ರಿಟಿಷ್ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ.‌ ಇದನ್ನೂ ಓದಿ: ದೆಹಲಿಯಲ್ಲಿ ಮಳೆ ಆರ್ಭಟ; ಪ್ರಮುಖ ರಸ್ತೆಗಳು ಜಲಾವೃತ – ಸಂಚಾರ ಅಸ್ತವ್ಯಸ್ತ

ಎಸ್‌ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಪ್ರಕಾರ, ಈ ಒಪ್ಪಂದವು ಭಾರತಕ್ಕೆ ಗಣನೀಯ ಆರ್ಥಿಕ ಉತ್ತೇಜನ ನೀಡಲಿದೆ. 2024ರಲ್ಲಿ ಯುಕೆಯಿಂದ ಭಾರತಕ್ಕೆ 130 ಬಿಲಿಯನ್ ಡಾಲರ್‌ನಷ್ಟು (ಭಾರತದ ಜಿಡಿಪಿಯ 3.3%) ವಿದೇಶಿ ವಿನಿಮಯ ಹರಿವು ದಾಖಲಾಗಿದ್ದು, ಈ ಒಪ್ಪಂದದಿಂದ ಈ ಹರಿವು ಮತ್ತಷ್ಟು ಹೆಚ್ಚಲಿದೆ. ವಿಶೇಷವಾಗಿ, ಯುಕೆಯಲ್ಲಿ ಕೆಲಸ ಮಾಡುವ ಭಾರತೀಯ ಐಟಿ ವೃತ್ತಿಪರರಿಗೆ ಮೂರು ವರ್ಷಗಳವರೆಗೆ ರಾಷ್ಟ್ರೀಯ ವಿಮೆಯಿಂದ ವಿನಾಯಿತಿ ನೀಡುವ ನಿಬಂಧನೆಯು ಅವರ ಉಳಿತಾಯ ಮತ್ತು ವಿದೇಶಿ ವಿನಿಮಯ ಹರಿವನ್ನು ಹೆಚ್ಚಿಸಲಿದೆ. 2024ರಲ್ಲಿ 56.7 ಬಿಲಿಯನ್ ಡಾಲರ್‌ ಆಗಿರುವ ದ್ವಿಪಕ್ಷೀಯ ವಾಣಿಜ್ಯವನ್ನು 2030ರ ವೇಳೆಗೆ ದ್ವಿಗುಣಗೊಳಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.

ಬ್ರಿಟನ್ ಭೇಟಿಯ ಬಳಿಕ, ಪ್ರಧಾನಿ ಮೋದಿ ಜುಲೈ 25-26ರಂದು ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಮಾಲ್ಡೀವ್ಸ್‌ನ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಮಾಲ್ಡೀವ್ಸ್, ಈ ಸಂದರ್ಭದಲ್ಲಿ ಮೋದಿಯವರಿಗೆ ಗೌರವಾನ್ವಿತ ಸ್ವಾಗತವನ್ನು ನೀಡಲಿದೆ. ಮಾಲ್ಡೀವ್ಸ್‌ನ ರಾಷ್ಟ್ರಪತಿ ಮೊಹಮ್ಮದ್ ಮುಯಿಝು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋದಿ, ಎರಡೂ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

ಕಳೆದ ಕೆಲವು ವರ್ಷಗಳಲ್ಲಿ ಭಾರತ-ಮಾಲ್ಡೀವ್ಸ್ ಸಂಬಂಧಗಳು ಕೆಲವು ಏರಿಳಿತಗಳನ್ನು ಕಂಡಿವೆ. 2023ರಲ್ಲಿ ಮುಯಿಝು ಅವರು ‘ಇಂಡಿಯಾ ಔಟ್’ ಚುನಾವಣಾ ಪ್ರಚಾರದೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಎರಡೂ ದೇಶಗಳು ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲು ಕಾರ್ಯನಿರ್ವಹಿಸಿವೆ. ಭಾರತವು ಮಾಲ್ಡೀವ್ಸ್‌ಗೆ 2024-25ರಲ್ಲಿ 470 ಕೋಟಿ ರೂ.ನಿಂದ 600 ಕೋಟಿ ರೂ.ಗೆ ಹೆಚ್ಚಳವಾದ ಲೈನ್ ಆಫ್ ಕ್ರೆಡಿಟ್ ಮತ್ತು ಕರೆನ್ಸಿ ಸ್ವಾಪ್ ಸೌಲಭ್ಯವನ್ನು ವಿಸ್ತರಿಸಿದೆ. ಇದರಿಂದ ಮಾಲ್ಡೀವ್ಸ್‌ನ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ನೆರವಾಗಿದೆ.