ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ: ರಾಹುಲ್‍ಗೆ ಮೋದಿ ಅಭಿನಂದನೆ

ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ, ಚುನಾವಣೆಯಲ್ಲಿ ಗೆದ್ದ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಈ ಅಧ್ಯಕ್ಷರಾಗಿ ಆಯ್ಕೆ ಆಗಿರುವ ರಾಹುಲ್ ಗಾಂಧಿ ಡಿಸೆಂಬರ್ 16 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಡಿಸೆಂಬರ್ 4 ರಂದು ಅಧ್ಯಕ್ಷ ಸ್ಥಾನದ ಚುನಾವಣೆಗೆ ರಾಹುಲ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ ಎನ್ನುವ ವಿಚಾರ ಅಂದೇ ಪ್ರಕಟವಾಗಿತ್ತು. ಆದರೆ ಇಂದು ಅಧಿಕೃತವಾಗಿ ಪ್ರಕಟವಾಗಿದೆ. ವಿಶೇಷ ಏನೆಂದರೆ ಗುಜರಾತ್ ಫಲಿತಾಂಶ ಪ್ರಕಟವಾಗುವ ಎರಡು ದಿನ ಮೊದಲು ರಾಹುಲ್ ಗಾಂಧಿ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಆಂತರಿಕ ಚುನಾವಣಾ ಅಧಿಕಾರಿ ಮುಲ್ಲಪಳ್ಳಿ ರಾಮಚಂದ್ರನ್ ರಾಹುಲ್ ಅವಿರೋಧ ಆಯ್ಕೆ ಯನ್ನು ಖಚಿತ ಪಡಿಸಿದರು. ರಾಹುಲ್ ಗಾಂಧಿ ಅಧ್ಯಕ್ಷರಾದ ಸುದ್ದಿ ಕೇಳುತ್ತಿದ್ದಂತೆ ದೆಹಲಿಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ದೌಡಾಯಿಸಿದ ಸಾವಿರಾರು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ನೃತ್ಯ ಮಾಡುವ ಮೂಲಕ ರಾಹುಲ್ ಗಾಂಧಿ ಆಯ್ಕೆಯನ್ನು ಸ್ವಾಗತಿಸಿದರು.

ರಾಹುಲ್ ಗಾಂಧಿ ನೆಹರೂ-ಗಾಂಧಿ ಕುಟುಂಬದಲ್ಲಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿರುವ 6ನೇ ನಾಯಕರಾಗಿದ್ದು, ಸುದೀರ್ಘ ಅವಧಿ ವರೆಗೆ ಕಾಂಗ್ರೆಸ್ ಆಧ್ಯಕ್ಷರೆಂಬ ಹೆಗ್ಗಳಿಕೆ ಪಡೆದಿರುವ ಸೋನಿಯಾ ಗಾಂಧಿ ಡಿಸೆಂಬರ್ 16ರಂದು ಪುತ್ರ ರಾಹುಲ್ ಗಾಂಧಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

Comments

Leave a Reply

Your email address will not be published. Required fields are marked *