ಅಯೋಧ್ಯೆ ತೀರ್ಪು ತಡವಾಗಲು ಕಾಂಗ್ರೆಸ್ ಕಾರಣ: ಶಾ ನಂತರ ಮೋದಿ ವಾಗ್ದಾಳಿ

ರಾಂಚಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಗೃಹ ಸಚಿವ ಅಮಿತ್ ಶಾ ನಂತರ ಇದೀಗ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ವಿವಾದ ಬಗೆಹರಿಯದಿರಲು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ್ದಾರೆ.

ಜಾರ್ಖಂಡ್‍ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಅಯೋಧ್ಯೆಯ ವಿಚಾರದ ಕುರಿತು ಪರಿಹಾರ ಕಂಡುಕೊಳ್ಳುವಲ್ಲಿ ವಿಳಂಬ ಮಾಡಿತು. ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ವಿಚಾರವನ್ನು ಮಾತನಾಡುವುದನ್ನೇ ನಿಲ್ಲಿಸಿತು. ಅವರು ಪ್ರಯತ್ನ ಪಟ್ಟಿದ್ದರೆ ಅಯೋಧ್ಯೆ ಕುರಿತು ತೀರ್ಪನ್ನು ಮೊದಲೇ ಪಡೆಯಬಹುದಿತ್ತು. ಆದರೆ ಕಾಂಗ್ರೆಸ್ ಹಾಗೆ ಮಾಡಲಿಲ್ಲ. ಮತ ಬ್ಯಾಂಕ್‍ಗಾಗಿ ರಾಮ ಜನ್ಮ ಭೂಮಿಯ ವಿವಾದವನ್ನು ಬಳಸಿಕೊಂಡಿತು. ಕಾಂಗ್ರೆಸ್‍ನ ಇಂತಹ ವಿಚಾರಗಳೇ ದೇಶದ ಮೇಲೆ ಪರಿಣಾಮ ಬೀರಿದವು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

ಜಾರ್ಖಂಡ್‍ನ ಬಿಜೆಪಿ ಸರ್ಕಾರವು ರಾಜ್ಯದ ಸಂಪನ್ಮೂಲವನ್ನು ರಕ್ಷಿಸಿಸುವಲ್ಲಿ ಕೆಲಸ ಮಾಡಿದೆ. ಮುಖ್ಯಮಂತ್ರಿ ರಘುಬರ್ ದಾಸ್ ನೇತೃತ್ವದ ಜಾರ್ಖಂಡ್‍ನ ಬಿಜೆಪಿ ಸರ್ಕಾರವು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಮೊದಲ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಜಾರ್ಖಂಡ್‍ನಲ್ಲಿ ಸ್ಥಿರ ಮತ್ತು ಉತ್ತಮ ಆಡಳಿತವನ್ನು ನೀಡಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಐದು ವರ್ಷಗಳ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ 5 ವರ್ಷ ಬೇಕು

ಜಾರ್ಖಂಡ್‍ನ ಜಲ, ಜಂಗಲ್, ಜಮೀನನ್ನು ರಕ್ಷಿಸುವ ಕಾರ್ಯವನ್ನು ಬಿಜೆಪಿ ಮುಂದುವರಿಸಲಿದೆ. ಅಲ್ಲದೆ ಜಾರ್ಖಂಡ್‍ನಲ್ಲಿ ನಡೆಯುತ್ತಿರುವ ನಕ್ಸಲ್ ಚಟುವಟಿಕೆಗಳನ್ನು ತಡೆಯುವಲ್ಲಿ ಕ್ರಮ ವಹಿಸಿದೆ ಎಂದರು.

ಜಾರ್ಖಂಡ್ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಒಟ್ಟು 81 ಕ್ಷೇತ್ರಗಳಿಗೆ ಐದು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ನವೆಂಬರ್ 30 ಮತದಾನ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಡಿಸೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಅಯೋಧ್ಯೆ ತೀರ್ಪು ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ – ಅಮಿತ್ ಶಾ

ಇತ್ತೀಚೆಗೆ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಜಾರ್ಖಂಡ್‍ನ ಲತೇಹಾರ್ ಜಿಲ್ಲೆಯಲ್ಲಿ ಮಾತನಾಡಿದ್ದ ಅಮಿತ್ ಶಾ, ಈ ಪ್ರಕರಣದಲ್ಲಿ ಅಯೋಧ್ಯೆ ವಿಚಾರಣೆಯನ್ನು ವಿಳಂಬಗೊಳಿಸಲು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದೆ. ಆಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕೇ ಬೇಡವೇ? ನೀವೇ ಹೇಳಿ. ಆದರೆ ಈ ಪ್ರಕರಣವನ್ನು ಮುಂದುವರಿಸಲು ಕಾಂಗ್ರೆಸ್ ಬಿಟ್ಟಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಭವ್ಯ ದೇವಾಲಯ ನಿರ್ಮಿಸಲು ಅವಕಾಶ ಕಲ್ಪಿಸುವ ಮೂಲಕ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ ಎಂದಿದ್ದರು.

Comments

Leave a Reply

Your email address will not be published. Required fields are marked *