ಮೋದಿಯೊಬ್ಬರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ: ಉಪೇಂದ್ರ

ಉಡುಪಿ: ಮೋದಿಯೊಬ್ಬರಿಂದ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ ಎಂದು ನಟ ಕೆಪಿಜೆಪಿ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಪ್ಪಿ, ನಾನು ಪ್ರಾಕ್ಟಿಕಲ್ ಇಲ್ಲ ಅಂತ ಜನ ನನ್ನನ್ನು ನೋಡಿ ನಗುತ್ತಿದ್ದಾರೆ. ಆದರೆ ರಾಜಕೀಯ ದೃಷ್ಟಿಯಲ್ಲಿ ನೋಡಿದರೆ ನಾನು ಪ್ರಾಕ್ಟಿಕಲ್ ಇಲ್ಲ. ಪ್ರಜೆಗಳು ಮಾತನಾಡುವ ಕಾಲ ಬಂದಿದೆ ಎಂದು ಉಪ್ಪಿ ಹೇಳಿದರು. ಎಂಎಲ್‍ಎ ಸೀಟು ಗೆಲ್ಲಲು 50 ಕೋಟಿ ರೂಪಾಯಿ ಬೇಕು. ನನ್ನ ಬಳಿ ಕಾಸಿಲ್ಲ. ಆದರೆ ಕನಸಿದೆ. ಅದನ್ನು ಈಡೇರಿಸಲು ಜನ ಬೆಂಬಲ ಬೇಕಾಗಿದೆ ಎಂದರು.

ಸತ್ಯಕ್ಕೆ ಸಾವಿಲ್ಲ ಸತ್ಯ ಸಾಯೋದೇ ಇಲ್ಲ. ನನಗೆ ಶೀಘ್ರವಾಗಿ ಕೆಲಸವಾಗಬೇಕಿಲ್ಲ, ನಾನು ಸ್ಮಾರ್ಟಾಗಿ ಕೆಲಸ ಮಾಡುತ್ತೇನೆ. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್‍ಗೆ ಇತ್ತು. ಅರವಿಂದ ಕೇಜ್ರೀವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಹೇಳಿದರು. ನಮ್ಮ ದೇಶದಲ್ಲಿ ಆರೋಗ್ಯ, ಶಿಕ್ಷಣ ಸರಿಯಾಗಿ ಸಿಕ್ಕಿದ್ದರೆ ಇವತ್ತು ಭ್ರಷ್ಟಾಚಾರ ಎಂಬುವುದು ಇರುತ್ತಿರಲಿಲ್ಲ ಎಂದು ತಿಳಿಸಿದರು.

ರಾಷ್ಟ್ರೀಯ ಪಕ್ಷಗಳಿಂದ ಬೇಡಿಕೆ ಬಂದಿದೆ. 15 ವರ್ಷದಿಂದ ಆಹ್ವಾನಗಳಿದ್ದರೂ ನಾನು ನನ್ನ ಕನಸನ್ನು ಹೊತ್ತು ಈಗ ಹೊರಟಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟಿದ್ದೇನೆ. ಗಂಟೆ ಬಾರಿಸಲು ಜನ ಬೇಕು. 50 ಸಾವಿರ ಜನರ ಮೇಲ್ ಬಂದಿದೆ. 30 ಸಾವಿರ ಮಂದಿ ಕ್ರಿಯಾಶೀಲ ಜನ ನನ್ನ ಜೊತೆಗಿದ್ದಾರೆ ಎಂದು ಉಪೇಂದ್ರ ಹೇಳಿದರು. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನನ್ನ ಆಲೋಚನೆಯ ಜನ ತಮ್ಮ ಆಲೋಚನೆಗಳನ್ನು ಹೇಳಬೇಕಿದೆ ಎಂದು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *