ನನ್ನ ಸ್ನೇಹಿತನೊಂದಿಗೆ ಮಾತನಾಡಿದೆ – ಟ್ರಂಪ್‌ಗೆ ಅಭಿನಂದನೆ ಸಲ್ಲಿಸಿದ ಮೋದಿ

ನವದೆಹಲಿ: ಇಸ್ರೇಲ್‌-ಹಮಾಸ್‌ ನಡುವಿನ ಶಾಂತಿ ಒಪ್ಪಂದವನ್ನ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸ್ವಾಗತಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರೊಂದಿಗೆ ಮಾತನಾಡಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

ಟ್ರಂಪ್‌ (Donald Trump) ಅವರೊಂದಿಗೆ ಮಾತನಾಡಿದ ಬಳಿಕ ಎಕ್ಸ್‌ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ʻನನ್ನ ಸ್ನೇಹಿತ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿ ಐತಿಹಾಸಿಕ ಗಾಜಾ ಶಾಂತಿ ಒಪ್ಪಂದದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದೆ. ವ್ಯಾಪಾರ ಮಾತುಕತೆಗಳಲ್ಲಿ ಸಾಧಿಸಲಾದ ಉತ್ತಮ ಪ್ರಗತಿಯನ್ನೂ ಪರಿಶೀಲಿಸಿದೆ. ಮುಂಬರುವ ದಿನಗಳಲ್ಲಿ ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಸುಂಕದ ಉದ್ವಿಗ್ನತೆಯ ನಡುವೆ ಟ್ರಂಪ್‌ಗೆ ಕರೆ ಮಾಡಿರುವುದು ಮುಂದಿನ ದಿನಗಳಲ್ಲಿ ಭಾರತ-ಅಮೆರಿಕ ನಡುವಿನ ವ್ಯಾಪಾರದಲ್ಲಿ ಮತ್ತೆ ಬೆಳವಣಿಗೆ ಸಾಧಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ತಮಿಳುನಾಡಿನ 47 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ – ಕ್ರಮಕ್ಕೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ ಬರೆದ ಸ್ಟಾಲಿನ್

ಇಸ್ರೇಲ್-ಗಾಜಾದ ಹಮಾಸ್ ನಡುವಿನ ಯುದ್ಧ ಕೊನೆಗೂ ಅಂತ್ಯವಾಗಿದೆ. ಶಾಂತಿ ಒಪ್ಪಂದದ ಮೊದಲ ಹಂತಕ್ಕೆ ಇಸ್ರೇಲ್-ಹಮಾಸ್ ಒಪ್ಪಿಗೆ ಸೂಚಿಸಿವೆ. ಶೀಘ್ರದಲ್ಲೇ ಒತ್ತೆಯಾಳುಗಳ ಬಿಡುಗಡೆ ನಡೆಯಲಿದೆ ಅಂತ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಇದು ಶಾಂತಿಯ ಪ್ರಾರಂಭದ ಹೊಸ ಅಧ್ಯಾಯ ಅಂತ ಸೋಷಿಯಲ್ ಮೀಡಿಯಾ ಟ್ರೂಥ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಒಪ್ಪಂದವು ಗಾಜಾದ ಮೇಲಿನ ಯುದ್ಧದ ಅಂತ್ಯ, ಇಸ್ರೇಲಿ ಪಡೆಗಳ ಹಿಂತೆಗೆತ, ಗಾಜಾಗೆ ಅಂತಾರಾಷ್ಟ್ರೀಯ ನೆರವಿನ ಪ್ರವೇಶ ಮತ್ತು ಕೈದಿಗಳ ವಿನಿಮಯವನ್ನು ಖಚಿತಪಡಿಸುತ್ತದೆ ಎಂದು ಹಮಾಸ್ ಕೂಡ ಹೇಳಿಕೆಯಲ್ಲಿ ದೃಢಪಡಿಸಿದೆ. ಇದು ಇಸ್ರೇಲ್‌ಗೆ ದೊರೆತ ರಾಜತಾಂತ್ರಿಕ ಮತ್ತು ನೈತಿಕ ಜಯ ಅಂತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ: ಜಾತಿ ಕಿರುಕುಳಕ್ಕೆ ಬೇಸತ್ತು IPS ಅಧಿಕಾರಿ ಸಾವು – IAS ಪತ್ನಿ ದೂರು ನೀಡಿದ್ರೂ FIR ದಾಖಲಿಸದ ಪೊಲೀಸರು

2023ರ ಅಕ್ಟೋಬರ್‌ನಿಂದ ಇಸ್ರೇಲ್ ನಡೆಸಿದ ಗಾಝಾ ಯುದ್ಧದಲ್ಲಿ ಕನಿಷ್ಠ 67,183 ಮಂದಿ ಮೃತಪಟ್ಟಿದ್ದು, 169,841 ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ, ಟ್ರಂಪ್ ನಾಯಕತ್ವವನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, ಶಾಶ್ವತ-ನ್ಯಾಯಯುತ ಶಾಂತಿ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಅಂದಿದ್ದಾರೆ.