ಪಿಎಂ ಕೇರ್ಸ್ ಫಂಡ್‍ಗೆ ವಾರಸುದಾರರು ಯಾರು?: ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನೆ

ಹುಬ್ಬಳ್ಳಿ: ಪಿಎಂ ಕೇರ್ಸ್ ಫಂಡ್ ಸರ್ಕಾರದ ನಿಧಿಯಲ್ಲಿ ಇಲ್ಲವೆಂದು ಕೇಂದ್ರ ಸರ್ಕಾರ ದೆಹಲಿ ಕೋರ್ಟ್‍ಗೆ ಅಫಿಡೆವಿಟ್ ನೀಡಿದೆ. ಹಾಗಾದರೆ ಈ ನಿಧಿಗೆ ನಿಜವಾದ ವಾರಸುದಾರರು ಯಾರು? ಯಾರ ಉದ್ಧಾರಕ್ಕಾಗಿ ದೇಣಿಗೆ ರೂಪದಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ಪ್ರಥಮ ಅಲೆಯಲ್ಲಿ ಕೇಂದ್ರ ರಾಷ್ಟ್ರೀಯ ವಿಪತ್ತು ನಿಧಿಗೆ ಪರ್ಯಾಯವಾಗಿ ಪಿಎಂ ಕೇರ್ಸ್ ಫಂಡ್ ಸ್ಥಾಪಿಸಿ ಕೊಟ್ಯಂತರ ರೂಪಾಯಿ ಸಂಗ್ರಹಿಸಲಾಗಿದೆ. ಈ ಹಣಕ್ಕೆ ಉತ್ತರದಾಯಿತ್ವ ಇರಬೇಕಲ್ಲವೆ? ಕೊರೊನಾದಂಥ ಸಂಕಷ್ಟ ಸಂದರ್ಭದಲ್ಲೂ ಭಾವನಾತ್ಮಕ ಭಾಷಣದಿಂದ ಜನರಿಂದ ಪಿಎಂ ಕೇರ್ಸ್ ಮೂಲಕ ಹಣ ಲೂಟಿ ಮಾಡಲಾಗಿದೆ. ಇದೀಗ ಕೇಂದ್ರದ ಅಫಿಡೆವಿಟ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ ಅಪ್ಪ-ಅಮ್ಮನೇ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

ಪ್ರಧಾನಿಯವರ ಕರೆಗೆ ಓಗೊಟ್ಟು ಭಾರತೀಯರು ಪಿಎಂ ಕೇರ್ಸ್‍ಗೆ ತಮ್ಮ ದುಡಿಮೆಯಲ್ಲಿ ಒಂದಿಷ್ಟು ಹಣ ನೀಡಿದ್ದಾರೆ. ದೇಶದ ಜನ ಸಂಕಷ್ಟಕ್ಕಾಗಿ ಸಂಗ್ರಹಿಸಿರುವ ನಿಧಿಯನ್ನು ಕೇಂದ್ರ ಸರ್ಕಾರದ ನಿಧಿ ಅಲ್ಲ ಎಂದು ಅಫಿಡೆವಿಟ್ ನೀಡಿದೆ. ಇದು ಸರ್ಕಾರದ ಸ್ವತ್ತು ಆಗಲ್ಲ ಎನ್ನುವುದಾದರೆ ಪ್ರಧಾನ ಮಂತ್ರಿ ಹೆಸರಲ್ಲಿ ಸ್ಥಾಪಿಸುವ ಉದ್ದೇಶವೇನಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಲ್ಲಿ ಸ್ಥಾಪಿತವಾದ ಪಿಎಂ ಕೇರ್ಸ್ ಸರ್ಕಾರದ ನಿಧಿಯಲ್ಲಿ ಸಂಗ್ರಹವಾದ ಹಣ ಭಾರತದ ಏಕೀಕೃತ ನಿಧಿಗೆ ಹೋಗಲ್ಲ ಎಂಬ ಕೇಂದ್ರದ ವಾದ ಸರಿಯಲ್ಲ, ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅದರದ್ದೇ ಆದ ಘನತೆ-ಗೌರವವಿದೆ. ಆದರೆ ಪ್ರಧಾನಿ ಸ್ಥಾನದಲ್ಲಿ ಕುಳಿತವರಿಂದಲೇ ಆ ಸ್ಥಾನದ ಘನತೆಗೆ ಧಕ್ಕೆಯಾದರೆ, ಅದು ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವೆ ಎಂದು ಪ್ರಸಾದ್ ಅಬ್ಬಯ್ಯ ಕೇಂದ್ರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತಾಂತರವೇ ಮಾಡಲ್ಲ ಅನ್ನೋ ಬಿಷಪ್‍ಗಳು ಯಾಕೆ ಸಿಎಂ ಬಳಿ ಓಡಿ ಬಂದಿದ್ದಾರೆ: ಪ್ರತಾಪ್ ಸಿಂಹ ಪ್ರಶ್ನೆ

Comments

Leave a Reply

Your email address will not be published. Required fields are marked *