ಸಿದ್ದರಾಮಯ್ಯನವರೇ ನೀವು ಕಾಂಗ್ರೆಸ್‌ನವರಾದ್ರೆ ಈಗ ಕುಳಿತುಕೊಳ್ಳಿ – ಕೈ ಮುಖಂಡ ಮನವಿ

Congress (2)

ಹಾಸನ: ಸಿದ್ದರಾಮಯ್ಯ ಅವರೇ ಹೋಗ್ಬೇಡಿ ಕುಳಿತುಕೊಳ್ಳಿ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಮ್ಮ ಭಾಷಣ ಕೇಳುವಂತೆ ವೇದಿಕೆಯಲ್ಲೇ ನಿಂತು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಕೂಗು ಇದೀಗ ಚರ್ಚೆಗೂ ಕಾರಣವಾಗಿದೆ.

ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಮುಗಿದ ತಕ್ಷಣ ಸಭೆ ಮುಕ್ತಾಯಗೊಳ್ಳುತ್ತಿತ್ತು. ಈ ಬೆನ್ನಲ್ಲೇ ಸಿದ್ದರಾಮಯ್ಯ ಅವರೊಂದಿಗೆ ಇತರ ಮುಖಂಡರೂ ವೇದಿಕೆಯಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ಮೈಕ್ ಹಿಡಿದು ನಿಂತ ಸ್ಥಳೀಯ ಮುಖಂಡರೊಬ್ಬರು ನೀವು ನಿಜವಾದ ಕಾಂಗ್ರೆಸ್ ನವರಾದ್ರೆ ಈಗ ಕುಳಿತುಕೊಳ್ಳಿ, ನನ್ನಭಾಷಣ ಕೇಳಿ ಎಂದು ಮೈಕ್‌ನಲ್ಲಿ ಮತ್ತೆ ಮತ್ತೆ ಮನವಿ ಮಾಡಿದರು. ಆದರೂ ಇದ್ಯಾವುದು ಕೇಳಿಸದಂತೆ ಸಿದ್ದರಾಮಯ್ಯ ವೇದಿಕೆಯಿಂದ ಕೆಳಗಿಳಿದು ಹೊರಟೇಬಿಟ್ಟರು.

ಪಟ್ಟು ಬಿಡದೆ ಖಾಲಿ ವೇದಿಕೆಯಲ್ಲೇ ನಿಂತು ಭಾಷಣ ಮಾಡಿದ ವ್ಯಕ್ತಿ, ಸಿದ್ದರಾಮಯ್ಯ ಅವರು 5 ನಿಮಿಷ ಇಲ್ಲಿ ಕುಳಿತುಕೊಳ್ಳಬೇಕಿತ್ತು, ನಾನು ಬಿಜೆಪಿ ಹರಣಗಳನ್ನೆಲ್ಲಾ ಬಯಲು ಮಾಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಈಗಾಗಲೇ ಭಿನ್ನಮತ ಸ್ಫೋಟಗೊಂಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಮುಖಂಡನ ಕೂಗು, ಪ್ರತಿಪಕ್ಷಗಳ ಟೀಕೆಗೆ ಅಸ್ತ್ರವಾಗಿದೆ. ಸ್ಥಳೀಯ ಮುಖಂಡರ ಮಾತನ್ನೇ ಕೇಳಿಸಿಕೊಳ್ಳುವಷ್ಟು ತಾಳ್ಮೆಯಿಲ್ಲದವರು ಸಂಘಟನೆ ಹೇಗೆ ಮಾಡುತ್ತಾರೆ? ಎಂದು ಪ್ರತಿ ಪಕ್ಷದ ಮುಖಂಡರು ಟೀಕಿಸಲು ಪ್ರಾರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *