ಪ್ರತಿಭಟನೆ, ಅಸಮಾಧಾನಕ್ಕೆ ಆಸ್ಪದ ಕೊಡಬೇಡಿ- ಈಶ್ವರಪ್ಪ ಮನವಿ

ಬೆಂಗಳೂರು: ಖಾತೆ ಹಂಚಿಕೆಯಲ್ಲಿ ಆರ್ ಅಶೋಕ್, ಜಗದೀಶ್ ಶೆಟ್ಟರ್, ಸಿಟಿ ರವಿ ಹಾಗೂ ಸೋಮಣ್ಣ ಅಸಮಾಧಾನ ಹೊರ ಹಾಕುತ್ತಿದ್ದಂತೆಯೇ ಇತ್ತ ಈಶ್ವರಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡದ್ದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಿಡಿಕಾರಿದ್ದು, ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಈಶ್ವರಪ್ಪ, ಪ್ರತಿಭಟನೆ ಹಾಗೂ ಅಸಮಾಧಾನಕ್ಕೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. “ಈಗ ನಮ್ಮೆಲ್ಲರ ದೃಷ್ಟಿ ರಾಜ್ಯದ ಅಭಿವೃದ್ಧಿಯ ಮೇಲೆ ಮಾತ್ರ ಇರಬೇಕು. ಅತಿವೃಷ್ಠಿ-ಅನಾವೃಷ್ಠಿಯಿಂದ ಬಳಲಿರುವ ಜನರಿಗೆ ಬೆಂಬಲಗಾಗಿ ನಿಲ್ಲಬೇಕು. ಪಕ್ಷದ ವರಿಷ್ಠರು ನಿರ್ಧರಿಸಿ ನಿಯೋಜಿಸಿರುವ ಜವಾಬ್ದಾರಿಯನ್ನು ನಿಭಾಯಿಸಲು ನಾವು ಕಾರ್ಯ ತತ್ಪರರಾಗಬೇಕು. ಯಾವುದೇ ಪ್ರತಿಭಟನೆ, ಅಸಮಾಧಾನಕ್ಕೆ ಆಸ್ಪದ ಕೊಡಬಾರದು ಎಂದು ನನ್ನ ಕಳಕಳಿಯ ಮನವಿ” ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಈ ಬಾರಿ ಅವರಿಗೆ ಮತ್ತೆ ಡಿಸಿಎಂ ಪೋಸ್ಟ್ ನೀಡದ್ದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆಕ್ಟೀವ್ ಆಗಿದೆ.

ಇಂಧನ ಖಾತೆ ಕೇಳಿದ್ದ ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ ಖಾತೆ ನೀಡಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಕ್ಕೆ ಅಪಮಾನ ಮಾಡಿದ್ದಾರೆಂದು ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಈಶ್ವರಪ್ಪರಿಗೆ ಡಿಸಿಎಂ ಹುದ್ದೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

https://www.youtube.com/watch?v=PsX3iRA0uUs

Comments

Leave a Reply

Your email address will not be published. Required fields are marked *