ಆಟವಾಡಲು ಮಗನಿಗೆ ಫೋನ್ ಕೊಟ್ಟು ಸಿಕ್ಕಾಕೊಂಡ ತಂದೆ

ಬೆಂಗಳೂರು: 43 ವರ್ಷದ ತಂದೆಯೊಬ್ಬ ಮಗನಿಗೆ ಆಡಲು ಮೊಬೈಲ್ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾನೆ. 14 ವರ್ಷದ ಮಗ ತನ್ನ ತಂದೆ ಲವ್ವರ್ ಜೊತೆ ಮಾತನಾಡಿದ್ದನ್ನು ಪತ್ತೆ ಮಾಡಿ ತಾಯಿಗೆ ತಿಳಿಸಿದ್ದಾನೆ. ಈ ಮೂಲಕ ತಂದೆ ತನ್ನ ಅಕ್ರಮ ಸಂಬಂಧವನ್ನು ತಾನೇ ಬಯಲು ಮಾಡಿಕೊಂಡಂತಾಗಿದೆ.

ಬೆಂಗಳೂರಿನ ಬನಶಂಕರಿ ಮೂರನೇ ಹಂತದ ನಿವಾಸಿಯಾಗಿರುವ 39 ವರ್ಷದ ಮಹಿಳೆ ಮೀನಾಕ್ಷಿ(ಹೆಸರು ಬದಲಾಯಿಸಲಾಗಿದೆ) ಪತಿಯ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ಹಲ್ಲೆ ಆರೋಪವನ್ನೂ ಮಾಡಿದ್ದಾರೆ.

ಏನಿದು ಪ್ರಕರಣ?
ಮೀನಾಕ್ಷಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಪತಿ ನಾಗರಾಜು, ಸಾಮಾಜಿಕ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದನು. ಜುಲೈ 11 ತನ್ನ ಮಗನಿಗೆ ಮೊಬೈಲ್ ಕೊಟ್ಟಿದ್ದು, ಮಗ ಆಟವಾಡುತ್ತಿದ್ದನು. ಆದರೆ ಆಕಸ್ಮಿಕವಾಗಿ ಫೋನ್ ರೆಕಾರ್ಡರ್ ಹಾಗೂ ವಾಟ್ಸಪ್ ಚಾಟ್ ಓಪನ್ ಆಗಿದೆ. ಈ ವೇಳೆ ವಾಟ್ಸಪ್‍ಗೆ ಅಶ್ಲೀಲ ಸಂದೇಶ, ಆಡಿಯೋ ಬಂದಿರುವುದನ್ನು ಮಗ ಗಮನಿಸಿದ್ದಾನೆ. ಅಷ್ಟೇ ಅಲ್ಲದೆ ತನ್ನ ತಂದೆ ಬೇರೊಬ್ಬ ಮಹಿಳೆ ಜೊತೆ ಮಾತನಾಡಿರುವ ಆಡಿಯೋವನ್ನು ಕೇಳಿಸಿಕೊಂಡಿದ್ದಾನೆ. ತಕ್ಷಣ ಮಗ ತನ್ನ ತಾಯಿಗೆ ಫೋನ್ ತೆಗೆದುಕೊಂಡು ಹೋಗಿ ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ಈ ಬಗ್ಗೆ ಪತಿಯನ್ನು ಪ್ರಶ್ನೆ ಮಾಡಿದೆ. ಆದರೆ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೀನಾಕ್ಷಿ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ಬೇರೆ ಯಾರಿಗಾದರೂ ಹೇಳಿದರೆ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಮೀನಾಕ್ಷಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ವಿಚಾರಣೆ ಮಾಡಲು ಮೀನಾಕ್ಷಿಯನ್ನು ಪೊಲೀಸ್ ಠಾಣೆಗೆ ಕರೆದಿದ್ದಾರೆ. ಆದರೆ ಮಹಿಳೆ ಪೊಲೀಸ್ ಠಾಣೆಗೆ ಬರುವುದಕ್ಕೆ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಈ ಕೇಸಿನ ವಿಚಾರಣೆ ಇನ್ನೂ ನಡೆಸಿಲ್ಲ. ಮಹಿಳೆಗೆ ದೂರು ಹಿಂಪಡೆಯುವಂತೆ ನಾಗರಾಜ್ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *