ಚಿಕ್ಕಬಳ್ಳಾಪುರ: ಕೊರೊನಾದಿಂದ ಗುಣಮುಖರಾದವರು ರಕ್ತದಾನ ಮಾಡಿದ್ದು ಪ್ಲಾಸ್ಮಾ ಸಿದ್ಧವಾಗಿದೆ. ಆದ್ರೆ ಪ್ಲಾಸ್ಮಾ ಟ್ರಾನ್ಸ್ ಫ್ಲಾಂಟ್ ಮಾಡುವಂತಹ ರೋಗಿಗಳೇ ನಮ್ಮ ರಾಜ್ಯದಲ್ಲಿಲ್ಲ ಅಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಮೊಬೈಲ್ ಸ್ವಾಬ್ ಕಲೆಕ್ಷನ್ ಯೂನಿಟ್ ಉದ್ಗಾಟನೆ ಮಾಡಿ ಮಾತನಾಡಿದ ಸಚಿವ ಸುಧಾಕರ್, ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿನ 523 ಪ್ರಕರಣಗಳಲ್ಲಿ 198 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದ 325 ಮಂದಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಉಳಿದವರಲ್ಲಿ ಶೇ.90 ರಷ್ಟು ಮಂದಿ ಆರೋಗ್ಯಕರವಾಗಿದ್ದು ಯಾವುದೇ ತೊಂದರೆ ಇಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ. ಹಲವರು ದಾನಿಗಳು ಮುಂದೆ ಪ್ಲಾಸ್ಮಾ ದಾನ ಮಾಡಿದ್ರೂ ಪ್ಲಾಸ್ಮಾ ಥೆರೆಪಿ ಮಾಡೋಕೆ ರೋಗಿಗಳೇ ಇಲ್ಲ ಎಂದರು.

ರಾಜ್ಯದಲ್ಲಿ ಇಂದು 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 523 ಕ್ಕೆ ಏರಿಕೆಯಾಗಿದೆ. ಕಲಬುರಗಿ 6, ಗದಗ 1, ಬೆಂಗಳೂರು (ಪಾದರಾಯನಪುರ)1 ಮತ್ತು ಬಾಗಲಕೋಟೆಯ ಮೂವರಿಗೆ ಇಂದು ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನು ಹೊಂಗಸಂದ್ರದ 145 ಮತ್ತು ಪಾದರಾಯನಪುರದ 70 ಜನರ ವರದಿ ನೆಗೆಟಿವ್ ಬಂದಿದೆ.

ಪ್ಲಾಸ್ಮಾ ಥೆರಪಿ ಎಂದರೇನು?
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

Leave a Reply