ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

ನೂರ್ ಸುಲ್ತಾನ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವೊಂದು ಕಟ್ಟಡಕ್ಕೆ ಡಿಕ್ಕಿ ಹೊಡೆದು 14 ಸಾವನ್ನಪ್ಪಿದ ದುರಂತ ಕಝಾಕಿಸ್ತಾನದ ಅಲ್ಮಾಟಿ ಪ್ರದೇಶದಲ್ಲಿ ಸಂಭವಿಸಿದೆ.

ಸುಮಾರು 100 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಕಝಾಕಿಸ್ತಾನದ ಅಲ್ಮಾಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೂರ್ ಸುಲ್ತಾನ್‍ಗೆ ಹೊರಟಿತ್ತು. 95 ಪ್ರಯಾಣಿಕರು ಹಾಗೂ 5 ಮಂದಿ ವಿಮಾನ ಸಿಬ್ಬಂದಿಯನ್ನು ಹೊತ್ತು ಈ ವಿಮಾನ ನೂರ್ ಸುಲ್ತಾನ್‍ಗೆ ಹೊರಟಿತ್ತು. ಆದರೆ ಏರ್‌ಪೋರ್ಟ್‌ನಿಂದ ವಿಮಾನ ಟೇಕಾಪ್ ಆದ ಕೆಲವೇ ಕ್ಷಣದಲ್ಲಿ ಈ ದುರ್ಘಟನೆ ಘಟಿಸಿದೆ.

ಏರ್‌ಪೋರ್ಟ್‌ ಸಮೀಪವಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಗೆ 22ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಗಾಯಗೊಂಡವರನ್ನು ವಿಮಾನ ನಿಲ್ದಾಣದ ಆಸ್ಪತ್ರೆಗೆ ರವಾನಿಸಲಾಗಿದೆ.

ಪೈಲೆಟ್ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಆದರೆ ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

ಈ ಅಪಘಾತದಲ್ಲಿ ವಿಮಾನವು ಎರಡು ಭಾಗವಾಗಿದದ್ದು, ಅರ್ಧದಷ್ಟು ಕಟ್ಟಡ ನೆಲಸಮವಾಗಿದೆ. ಈ ಬಗ್ಗೆ ಕಝಾಕಿಸ್ತಾನ ಅಧ್ಯಕ್ಷ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಈ ಅಪಘಾತಕ್ಕೆ ಕಾರಣರಾದ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *