ಎರಡು ಡೋಸ್ ಲಸಿಕೆ ಪಡೆದವರಿಗೆ ಗ್ರೀನ್ ಪಾಸ್, ಯೂನಿವರ್ಸಲ್ ಪಾಸ್ ಕೊಡುವ ಚಿಂತನೆ: ಸುಧಾಕರ್‌

ಬೆಂಗಳೂರು: ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದವರಿಗೆ ಗ್ರೀನ್‌ ಪಾಸ್‌ ಅಥವಾ ಯೂನಿವರ್ಸಲ್‌ ಪಾಸ್‌ ಕೊಡುವ ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಡೋಸ್‌ ಲಸಿಕೆ ಪಡೆದವರಿಗೆ ಗ್ರೀನ್‌ ಪಾಸ್‌, ಯೂನಿವರ್ಸಲ್‌ ಪಾಸ್‌ ಕೊಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಸ್‌ಗಳಲ್ಲಿ ಪ್ರಯಾಣ ಅಥವಾ ಹೋಟೆಲ್‌, ರೆಸ್ಟೋರೆಂಟ್‌ ಪ್ರವೇಶ ಹಾಗೂ ಇತರೆ ಅನುಮತಿಗಳಿಗಾಗಿ ಈ ಪಾಸ್‌ಗಳು ಮುಖ್ಯವಾಗಲಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿದೇಶಗಳಿಂದ ವಾಪಸ್ಸಾಗುವ ಪ್ರಯಾಣಿಕರಿಗೆ 7 ದಿನ ಹೋಂ ಕ್ವಾರಂಟೈನ್‌ ಕಡ್ಡಾಯ

ಕೊರೊನಾ ಸಂಭವನೀಯ ಮೂರನೇ ಅಲೆಯನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ. ಕೋವಿಡ್ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಹಲವು ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲಾ ಅಧಿಕಾರಿಗಳ ಸಮನ್ವಯ ಕುರಿತು ಸಭೆ ಮಾಡಲಾಗಿದೆ. ಕಳೆದ ಎರಡು ಅಲೆಗಳ ವೇಳೆ ಅನುಭವ ಪಡೆದ ಅಧಿಕಾರಿಗಳು ಈ ಬಾರಿ ಯಾವುದೇ ಲೋಪ ಆಗದಂತೆ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ, ಓಮಿಕ್ರಾನ್ ವಿಶ್ವದಲ್ಲಿ ಅತೀ ವೇಗವಾಗಿ ಹರಡುವ ಪ್ರಭೇದ ಎಂದು ತಿಳಿಸಿದೆ. ಡೆಲ್ಟಾ ಪ್ರಭೇದದ ರೋಗ ತೀವ್ರತೆ ಹೆಚ್ಚು, ಒಮಿಕ್ರಾನ್ ತೀವ್ರತೆ ಕಡಿಮೆ. ಎರಡು ಡೋಸ್ ಲಸಿಕೆ ಪಡೆದರೆ ಒಮಿಕ್ರಾನ್‌ನಿಂದ ತೀವ್ರತರಹ ವ್ಯಾಧಿ ಉಲ್ಬಣವಾಗುವುದಿಲ್ಲ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಬೇಕು: ಡಾ.ವಿಶಾಲ್ ರಾವ್

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರೋಗ ಲಕ್ಷಣ ಇರುವವರನ್ನು ಮಾತ್ರ ಪರೀಕ್ಷೆ ಮಾಡಿದರೆ ಸಾಕು. ಆದರೆ ಕರ್ನಾಟಕ ಸರ್ಕಾರ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರ ಪರೀಕ್ಷೆ ಕೂಡ ನಡೆಸಲಿದೆ. 2 ಡೋಸ್ ಲಸಿಕೆ ತೆಗೆದುಕೊಂಡವರಿಗೆ ಗ್ರೀನ್ ಪಾಸ್ ಅಥವಾ ಯೂನಿವರ್ಸಲ್ ಪಾಸ್ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಪ್ರತಿದಿನ ಸಂಜೆ 5 ಗಂಟೆಗೆ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಮನೆಯಲ್ಲಿ ಮೂರು ಪ್ರಕರಣ ಕಂಡು ಬಂದರೆ, ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪಾದಯಾತ್ರೆ ಕೈಬಿಡಿ
ಮೇಕೆದಾಟು ಪಾದಯಾತ್ರೆಗೆ ನಾವು ವಿರೋಧ ಮಾಡುತ್ತಿಲ್ಲ. ಆದರೆ ಹಿಂದೆ ಆಡಳಿತ ನಡೆಸಿದವರು, ಮುಖ್ಯಮಂತ್ರಿಯಾಗಿದ್ದವರು ಹಾಗೂ ಅಪಾರ ಅನುಭವ ಇರುವವರು ಈ ಬಗ್ಗೆ ಆಲೋಚಿಸಲಿ. ಪ್ರತಿಭಟನೆಗಳು ಪ್ರಜಾಪ್ರಭುತ್ವದ ಭಾಗವಾಗಿದೆ. ಪಾದಯಾತ್ರೆಯನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಿ. ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡುವುದು ಕೇವಲ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *