ಪಿಜ್ಜಾ ತಂದ ಆಪತ್ತು – ಡೆಲಿವರಿ ಬಾಯ್‍ಗೆ ಕೊರೊನಾ, ಕ್ವಾರಂಟೈನ್ ಆಯ್ತು 72 ಕುಟುಂಬ

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಹೆಸರಾಂತ ಪಿಜ್ಜಾ ಡೆಲಿವರಿ ಮಾಡುವ ರೆಸ್ಟೋರೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್‍ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಯುವಕನ ಸಂಪರ್ಕದಲ್ಲಿದ್ದ ಸಹೋದ್ಯೊಗಿಗಳು ಹಾಗೂ ಪಿಜ್ಜಾ ಡೆಲಿವರಿ ಪಡೆದಿದ್ದ 72 ಕುಟುಂಬಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಬುಧವಾರ ದಕ್ಷಿಣ ದೆಹಲಿಯ ಡಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಲ್ವಿಯಾ ನಗರದಲ್ಲಿ ಇರುವ ಪಿಜ್ಜಾ ಡೆಲಿವರಿ ಮಾಡುವ ರೆಸ್ಟೋರೆಂಟ್‍ನಲ್ಲಿ ಡೆಲಿವರಿ ಬಾಯ್ ಕರ್ತವ್ಯ ನಿರ್ವಹಿಸುತ್ತಿದ್ದನು. ಈತನಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ಬಂದ ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ತಕ್ಷಣ ಸೋಂಕಿತನ ಸಂಪರ್ಕದಲ್ಲಿದ್ದ 16 ಮಂದಿ ರೆಸ್ಟೋರೆಂಟ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಇಲ್ಲಿಂದ ಆಹಾರ ಡೆಲಿವರಿ ಪಡೆದ ಪ್ರತಿಯೊಂದ ಮನೆಯ ಮಾಹಿತಿ ಪಡೆಯಲಾಗಿದ್ದು, ಸುಮಾರು 72 ಕುಟುಂಬಗಳನ್ನು ಕ್ವಾರಂಟೈನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇದರಿಂದ ಭಯಪಡುವ ಅಗತ್ಯವಿಲ್ಲ. ಎಲ್ಲಾ ಡೆಲಿವರಿ ಬಾಯ್‍ಗಳು ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಹಾಕಿಕೊಂಡು ಪಿಜ್ಜಾ, ಆಹಾರ ಡೆಲಿವರಿ ಮಾಡಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ 16 ಸಿಬ್ಬಂದಿ ಹಾಗೂ 72 ಕುಟುಂಬಗಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.

ಸದ್ಯ ಸೋಂಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೆ ಇನ್ನು ಬೇರೆ ಯಾರದರೂ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರಾ ಎಂದು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಹೇಳಿದರು.

ಡೆಲಿವರಿ ಬಾಯ್‍ಯ ಸಹೋದ್ಯೊಗಿಗಳ ಪರೀಕ್ಷೆ ನಡೆಸಿದಾಗ ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಪಿಜ್ಜಾ ಡೆಲಿವರಿ ಮಾಡಿದ ರೆಸ್ಟೋರೆಂಟ್ ಅನ್ನು ಬಂದ್ ಮಾಲಾಗಿದೆ.

ಈ ರೆಸ್ಟೋರೆಂಟ್‍ನಿಂದ ಅನೇಕ ಆರ್ಡರ್ ಗಳನ್ನು ಝೊಮಾಟೊ ಆ್ಯಪ್ ಮೂಕಲ ಮಾಡಲಾಗಿದೆ. ಹೀಗಾಗಿ ಈ ರೆಸ್ಟೋರೆಂಟ್‍ನಿಂದ ಆರ್ಡರ್ ಪಡೆದು ಡೆಲಿವರಿ ಮಾಡಿದ ನಮ್ಮ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಝೊಮಾಟೊ ತಿಳಿಸಿದೆ.

Comments

Leave a Reply

Your email address will not be published. Required fields are marked *