ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

ನಿನ್ನೆಯಷ್ಟೇ ‘ಕೆಜಿಎಫ್ 2’ ಚಿತ್ರತಂಡವು ಪೈರಸಿ ಬಗ್ಗೆ ಮಾತನಾಡಿತ್ತು. ಪೈರಸಿ ಕಂಡು ಬಂದರೆ, ಈ ವಿಳಾಸಕ್ಕೆ ಮತ್ತು ಫೋನ್ ನಂಬರ್ ಗೆ ಸಂಪರ್ಕಿಸಿ ಎಂದು ಪೋಸ್ಟರ್ ರಿಲೀಸ್ ಮಾಡಿತ್ತು. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ದುರುಳರು ಕೆಜಿಎಫ್ 2 ಸಿನಿಮಾವನ್ನು ಪೈರಸಿ ಮಾಡಿದ್ದಾರೆ. ಇಡೀ ಸಿನಿಮಾ ಆನ್ ಲೈನ್ ನಲ್ಲಿ ಲಭ್ಯವಿದೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

ನಿರ್ದೇಶಕ ಪ್ರಶಾಂತ್ ನೀಲ್ ನಿನ್ನೆ ಮಾತನಾಡುತ್ತಾ, ‘ಯಾರೂ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಬೇಡಿ. ಚಿತ್ರದ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ. ಪೈರಸಿ ಮಾಡಿದ್ದಾರೆ ಎಂದು ಕಂಡು ಬಂದರೆ ,ಕೂಡಲೇ ದೂರು ನೀಡಿ. ಕೋಟಿ ಕೋಟಿ ಬಂಡವಾಳ ಸುರಿದು ಮಾಡಿರುವ ಸಿನಿಮಾವನ್ನು ಥಿಯೇಟರ್ ನಲ್ಲೇ ಬಂದು ನೋಡಿ’ ಎಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

ಪೈರಸಿ ಕಾಟ ನಿನ್ನೆ, ಮೊನ್ನೆಯದ್ದೇನೂ ಅಲ್ಲ. ಭಾರೀ ಬಜೆಟ್ ಚಿತ್ರಗಳು ರಿಲೀಸ್ ಆದಾಗ ಪೈರಸಿ ಸಾಮಾನ್ಯ ಅನ್ನುವಂತಾಗಿದೆ. ಪೈರಸಿ ಮಾಡಿದವರಿಗೆ ಕಠಿಣ ಕಾನೂನು ಕ್ರಮ ಇದ್ದರೂ, ಅದು ಹಲ್ಲು ಕಿತ್ತ ಹಾವಿನಂತಿದೆ. ಅಲ್ಲದೇ, ಪೈರಸಿ ಮಾಡುವ ಕಳ್ಳರು ಹೊರದೇಶದಿಂದ ಈ ಕೃತ್ಯವನ್ನು ಮಾಡುವುದರಿಂದ ಸುಲಭವಾಗಿ ಅವರನ್ನು ಗುರುತಿಸುವುದು ಕಷ್ಟವಾಗಿದೆ. ಈ ಕಾರಣದಿಂದಾಗಿ ಧೈರ್ಯದಿಂದ ಚಿತ್ರಗಳನ್ನು ಪೈರಸಿ ಮಾಡಲಾಗುತ್ತಿದೆ.

ಈ ಹಿಂದೆ ಕನ್ನಡದ ಅನೇಕ ಸ್ಟಾರ್ ನಟರ ಚಿತ್ರಗಳು ಪೈರಸಿ ಆಗಿದ್ದವು. ದೂರು ಕೂಡ ನೀಡಲಾಗಿತ್ತು. ಆದರೆ, ಈವರೆಗೂ ಪೈರಸಿ ಮಾಡಿದವರ ಮೇಲೆ ಕ್ರಮ ತಗೆದುಕೊಂಡಿದ್ದು ತೀರಾ ಕಡಿಮೆ. ಕಾನೂನು ಭಯವಿಲ್ಲದ ಕಾರಣಕ್ಕಾಗಿ ಪದೇ ಪದೇ ಪೈರಸಿ ಮಾಡಲಾಗುತ್ತಿದೆ ಎನ್ನುವುದು ಸತ್ಯ. ಇದೀಗ ಕೆಜಿಎಫ್ 2 ಚಿತ್ರ ಕೂಡ ಪೈರಸಿ ದಾಳಿಗೆ ತುತ್ತಾಗಿದ್ದು, ಪೈರಸಿ ಲಿಂಕ್ ಗಳನ್ನು ತಗೆಸುವ ಪ್ರಯತ್ನಕ್ಕೆ ಮುಂದಾಗಿದೆ ಚಿತ್ರತಂಡ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

ಸಾಮಾಜಿಕ ಜಾಲತಾಣಗಳ ಜತೆಗೆ ಕೆಲವು ಆಪ್ ಗಳಲ್ಲೂ ಕೆಜಿಎಫ್ 2 ಸಿನಿಮಾದ ಪೈರಸಿ ಕಾಪಿ ಸಿಗುತ್ತಿದ್ದು, ಅವುಗಳಿಂದ ಲಿಂಕ್ ತಗೆಸುವುದು ಸವಾಲಿನ ಕೆಲಸವೇ ಆಗಿದೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್ ಪೈರಸಿಯನ್ನು ತಡೆಗಟ್ಟಲು ಒಂದು ತಂಡವನ್ನೇ ಸಿದ್ಧಮಾಡಿದೆ.

Comments

Leave a Reply

Your email address will not be published. Required fields are marked *