ಯುಪಿ ಎನ್‍ಕೌಂಟರ್ ಶೈಲಿಗೆ ಅಖಿಲೇಶ್ ಯಾದವ್ ವಿರೋಧ – ಮೊದಲು ಒಬ್ಬನನ್ನು ಫಿಕ್ಸ್ ಮಾಡಿ ಕಟ್ಟುಕತೆ ಸೃಷ್ಟಿ ಮಾಡ್ತಾರೆಂದು ಆರೋಪ

– ಕುಟುಂಬಸ್ಥರು ಮಾತನಾಡದಂತೆ ಒತ್ತಡ ಹಾಕುತ್ತಾರೆ

ನವದೆಹಲಿ: ಹೈ-ಪ್ರೊಫೈಲ್‌ ದರೋಡೆ ಪ್ರಕರಣದ ಆರೋಪಿ ಮಂಗೇಶ್ ಯಾದವ್ ಎನ್‍ಕೌಂಟರ್ (BJP) ಕುರಿತು ನಡೆಯುತ್ತಿರುವ ವಿವಾದದ ನಡುವೆ ಸಮಾಜವಾದಿ ಪಕ್ಷದ (ಎಸ್‍ಪಿ) ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಉತ್ತರ ಪ್ರದೇಶದ (Uttar Pradesh) ಬಿಜೆಪಿ (BJP) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯು ನಕಲಿ ಎನ್‍ಕೌಂಟರ್‌ಗಳನ್ನ ನಡೆಸುತ್ತಿದೆ. ನಿರ್ದಿಷ್ಟವಾಗಿ ಜಾತಿಯ ಆಧಾರದ ಮೇಲೆ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ. ಆಡಳಿತಾರೂಢ ಬಿಜೆಪಿ ಮೊದಲು ಓರ್ವನನ್ನು ಟಾರ್ಗೆಟ್ ಮಾಡಿ ಆಯ್ಕೆ ಮಾಡುತ್ತದೆ. ಬಳಿಕ ಕಟ್ಟುಕಥೆ ಸೃಷ್ಟಿಸುತ್ತದೆ. ನಂತರ ಸಂತ್ರಸ್ತ ಕುಟುಂಬ ಮೌನವಾಗಿರುವಂತೆ ಒತ್ತಡ ಹೇರುತ್ತದೆ. ರಾಜ್ಯದ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಎನ್‍ಕೌಂಟರ್ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಆಗಸ್ಟ್‍ನಲ್ಲಿ ಸುಲ್ತಾನ್‍ಪುರದ ಆಭರಣ ಮಳಿಗೆಯೊಂದರಲ್ಲಿ 1.5 ಕೋಟಿ ರೂ. ದರೋಡೆಗೆ ಸಂಬಂಧಿಸಿದಂತೆ ಬೇಕಾಗಿದ್ದ ಮಂಗೇಶ್ ಯಾದವ್ ಹತ್ಯೆಯ ನಂತರ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಮಂಗೇಶ್ ಯಾದವ್ ಇತರ ನಾಲ್ವರು ಸೇರಿಕೊಂಡು ತಾಥೇರಿ ಬಜಾರ್‌ನಲ್ಲಿರುವ ಅಂಗಡಿಯನ್ನು ದರೋಡೆ ಮಾಡಿದ್ದರು. ಆತನ ತಲೆಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಸುಲ್ತಾನ್‍ಪುರದಲ್ಲಿ ಗುರುವಾರ ಮುಂಜಾನೆ ಎಸ್‍ಟಿಎಫ್ ತಂಡದ ನೇತೃತ್ವದಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ಮಂಗೇಶ್ ಯಾದವ್ ಸಾವನ್ನಪ್ಪಿದ್ದ. ಆತ ಜೌನ್‍ಪುರ, ಸುಲ್ತಾನ್‍ಪುರ ಮತ್ತು ಪ್ರತಾಪ್‍ಗಢ ಜಿಲ್ಲೆಗಳಲ್ಲಿ ಲೂಟಿ, ದರೋಡೆ ಮತ್ತು ಕಳ್ಳತನದಂತಹ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಏನಿದು ವಿವಾದ?
ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಎನ್‍ಕೌಂಟರ್‍ನ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಎನ್‍ಕೌಂಟರ್ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಚಪ್ಪಲಿ ಧರಿಸಿರುವ ಫೋಟೋವನ್ನು ಹಂಚಿಕೊಂಡು, ಅಂತಹ ಪಾದರಕ್ಷೆಗಳನ್ನು ತೊಟ್ಟು ಅಧಿಕಾರಿಗೆ ಹೇಗೆ ಕ್ರಿಮಿನಲ್‍ಗಳನ್ನು ಚೇಸ್ ಮಾಡಲು ಸಾಧ್ಯ? ಇದು ಎನ್‍ಕೌಂಟರ್‍ನ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದರು.

ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಾರೆ. ಜಾತಿ ಆಧಾರಿತವಾಗಿ ಇಂತಹ ಕ್ರಮಗಳಲ್ಲಿ ತೊಡಗುವುದಿಲ್ಲ ಎಂದು ಹೇಳಿದ್ದಾರೆ.