‘ರಾಬರ್ಟ್’ ಸಿನಿಮಾ ಸೆಟ್‍ನಲ್ಲಿ ಷರತ್ತುಗಳು ಅನ್ವಯ!

ಬೆಂಗಳೂರು: ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಈ ಸಿನಿಮಾವನ್ನು ‘ಚೌಕ’ ಸಿನಿಮಾ ಖ್ಯಾತಿಯ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

ಸಿನಿಮಾ ಸೆಟ್‍ನಲ್ಲಿ ಮೊಬೈಲ್ ಬಳಸಬಾರದು ಎಂಬ ಷರತ್ತು ಹಾಕಿದ್ದಾರೆ. ಚಿತ್ರೀಕರಣದಿಂದ ಸುಮಾರು 50 ಮೀಟರ್ ನಷ್ಟು ದೂರದವರೆಗೂ ಮೊಬೈಲ್ ಬಳಸಬಾರದು. ಈ ನಿಯಮವು ಕಲಾವಿದರು ಮತ್ತು ತಂತ್ರಜ್ಞರಿಗೆ ಇಬ್ಬರಿಗೂ ಅನ್ವಯಿಸುತ್ತದೆ ಎಂದು ನಿರ್ದೇಶಕರು ಕಟ್ಟುನಿಟ್ಟಿನ ಆದೇಶವನ್ನು ಜಾರಿ ಮಾಡಿದ್ದಾರೆ.

ಸೆಟ್‍ನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದರೆ ಕಲಾವಿದರು, ತಂತ್ರಜ್ಞರು ಎಲ್ಲರು ಸಿನಿಮಾ ಕಡೆ ಗಮನಹರಿಸುತ್ತಾರೆ. ಜೊತೆ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ನಿರ್ದೇಶಕರ ಆಶಯವಾಗಿದೆ. ಇನ್ನೊಂದು ಅನಗತ್ಯ ಫೋಟೋಗಳು ಅಥವಾ ವಿಡಿಯೋಗಳನ್ನು ಸೆರೆಹಿಡಿಯಬಾರದು. ಜೊತೆಗೆ ಅದನ್ನು ಪಬ್ಲಿಕ್ ಮಾಡಬಾರದು. ಈ ಮೂಲಕ ನಮ್ಮ ಶೂಟಿಂಗ್ ಸೆಟ್ ಅನ್ನು ವೃತ್ತಿಪರವಾದ ಸೆಟ್ ಆಗಿ ಮಾಡುವ ಉದ್ದೇಶದಿಂದ ಈ ಷರತ್ತು ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಶೂಟಿಂಗ್ ಸೆಟ್‍ಗೆ ಅಭಿಮಾನಿಗಳು ಬರಬಹುದು. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಬಹುದು ಮತ್ತು ಚಿತ್ರೀಕರಣವನ್ನು ವೀಕ್ಷಿಸಬಹುದು. ಆದರೆ ಯಾವುದೇ ರೀತಿಯ ಫೋಟೋಗಳನ್ನು ತೆಗೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸುಧೀರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ತಯಾರಕರು ಈ ನಿಯಯದ ಒಪ್ಪಂದಕ್ಕೆ ತಂತ್ರಜ್ಞರೊಂದಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಚಿತ್ರೀಕರಣದ ಸಮಯದಲ್ಲಿ ಯಾವುದೇ ರೀತಿಯ ವಿಷಯವನ್ನು ಲೀಕ್ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *