ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಮೇಲೆ 6 ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು

ಚಿಕ್ಕಮಗಳೂರು: ಅರಣ್ಯ ಇಲಾಖೆ ಚೆಕ್‍ಪೋಸ್ಟ್ ಮೇಲೆ ಕೆಲ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾದ ಘಟನೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಸರೀಕಲ್‍ನಲ್ಲಿ ನಡೆದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸರೀಕಲ್ ಚೆಕ್‍ಪೋಸ್ಟ್ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಅವರೇ ಈ ಕೃತ್ಯ ಎಸಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಕಚೇರಿಯ ಮೇಲೆ ಭಾನುವಾರ ಬೆಳಗಿನ ಜಾವ 3.30ಕ್ಕೆ ದಾಳಿ ಮಾಡಿದ್ದರಿಂದ ಕತ್ತಲಿನಲ್ಲಿ ದುಷ್ಕರ್ಮಿಗಳು ಕಾಣಲಿಲ್ಲ. ಸುಮಾರು 6 ಪೆಟ್ರೋಲ್ ಬಾಂಬ್ ಗಳನ್ನು ದುಷ್ಕರ್ಮಿಗಳು ಕಚೇರಿಯ ಮೇಲೆ ಎಸೆದಿದ್ದಾರೆ. ಪರಿಣಾಮ ಕೆಲ ಪೆಟ್ರೋಲ್ ಬಾಂಬ್‍ಗಳು ಕಚೇರಿಯ ಕಿಟಕಿಗೆ ತಗುಲಿದ್ದು, ಅಲ್ಲಿದ್ದ ರಿಜಿಸ್ಟರ್ ಪುಸ್ತಕಕ್ಕೆ ಬೆಂಕಿ ತಗುಲಿತ್ತು. ಅದೃಷ್ಟವಶಾತ್ ಈ ವೇಳೆ ಎಲ್ಲ ಸಿಬ್ಬಂದಿ ಕಚೇರಿಯ ಒಳಗೆ ಇದ್ದಿದ್ದರಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಷ್ಕರ್ಮಿಗಳು ಖಾಲಿ ಬಾಟಲಿಗೆ ಮರಳು ಹಾಗೂ ಸೀಮೆಎಣ್ಣೆ ತುಂಬಿ ಬೆಂಕಿ ಹಚ್ಚಿ ಎಸೆದಿದ್ದಾರೆ. ಬಾಟಲ್‍ಗಳು ಒಡೆದಿದ್ದು, ಒಟ್ಟು ಆರು ಪೆಟ್ರೋಲ್ ಬಾಂಬ್ ಎಸೆದಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಯೋಜಿತವಾಗಿ, ಚೆಕ್‍ಪೋಸ್ಟ್ ಕಚೇರಿಯ ಸಮೀಪದ ಮರದ ಕೆಳಗೆ ನಿಂತು ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ.

ಈ ದಾಳಿಯಿಂದಾಗಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ. ಇತ್ತ ಭಯೋತ್ಪಾದನ ನಿಗ್ರಹ ದಳ (ANF) ಸಿಬ್ಬಂದಿಯಿಂದ ಕೂಂಬಿಂಗ್ ಕಾರ್ಯಚರಣೆ ಕೂಡ ಆರಂಭವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *