ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ – ಕೇಂದ್ರ ಸರ್ಕಾರಕ್ಕೆ ಪ್ರತಿದಿನ 400 ಕೋಟಿ ಆದಾಯ

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದ ತಮ್ಮ ಚೊಚ್ಚಲ ಬಜೆಟ್‍ನಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಎರಡು ರೂಪಾಯಿ ಸೆಸ್ ವಿಧಿಸಲಾಗಿದೆ.

ಇದರಿಂದಾಗಿ ವಾಹನ ಸವಾರರು ಈಗಾಗ್ಲೇ ಸಿಟ್ಟಾಗಿದ್ದಾರೆ. ಆ ಸಿಟ್ಟು ಇನ್ನು ಒಂದೆರಡು ದಿನಗಳಲ್ಲಿ ತಣ್ಣಗಾಗುತ್ತೆ. ಜನ ಗೊಣಗಿಕೊಂಡೇ ತಮ್ಮ ತಮ್ಮ ವಾಹನಗಳಿಗೆ ತೈಲ ತುಂಬಿಸಿಕೊಳ್ಳುತ್ತಾರೆ. ಹೆಸರಿಗಷ್ಟೇ ಎರಡು ರೂಪಾಯಿ ಸುಂಕ ವಿಧಿಸುತ್ತಿದ್ದರೂ ಇದರಿಂದ ದೇಶದ ಜನತೆ ಮೇಲೆ ಬೀಳುವ ಹೊರೆ ಪ್ರಮಾಣ ಎಷ್ಟು ಎಂದು ಕೇಳಿದರೆ ಒಂದು ಕ್ಷಣ ದಂಗಾಗ್ತೀರಿ.

1 ಲೀಟರ್ ಮೇಲೆ 2 ರೂ.ಸೆಸ್ (ಮೇಲ್ತೆರಿಗೆ) ವಿಧಿಸಿರೋದರಿಂದ ಕೇಂದ್ರ ಸರ್ಕಾರಕ್ಕೆ ಪ್ರತಿದಿನ 400 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದ್ರೆ ವರ್ಷಕ್ಕೆ ಬರೋಬ್ಬರಿ 1 ಲಕ್ಷ 42 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಕೇಂದ್ರಕ್ಕೆ ಸಿಗುತ್ತದೆ. ಅಷ್ಟು ಹೊರೆ ಗ್ರಾಹಕರ ಮೇಲೆನೇ ಬೀಳುತ್ತದೆ ಎನ್ನಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್‍ನಲ್ಲಿ ಸಂಗ್ರಹಗೊಂಡ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಈ ಅಂಶಗಳನ್ನು ಪ್ರಸ್ತಾಪ ಮಾಡುತ್ತಿದ್ದಂತೆಯೇ ಕುಳಿತಿದ್ದ ವಿರೋಧ ಪಕ್ಷದ ಸದಸ್ಯರು ಅಲ್ಲೇ ವಿರೋಧ ವ್ಯಕ್ತಪಡಿಸಿದರು.

ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದಾಗ ಭಾರತದ ಕೆಲ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ.ಗೆ ಏರಿತ್ತು. ಈ ವೇಳೆ ಕೇಂದ್ರ ಸರ್ಕಾರ 1 ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಮೊದಲ ಅವಧಿಯಲ್ಲಿ ಕೆಲವೊಮ್ಮೆ ಕಚ್ಚಾ ತೈಲದ ಬೆಲೆ ಕಡಿಮೆಯಾದಾಗ ಅಬಕಾರಿ ಸುಂಕ ಕಡಿಮೆ ಮಾಡುವಂತೆ ಆಗ್ರಹ ಕೇಳಿ ಬಂದಿತ್ತು. ಈ ವೇಳೆ ಪೆಟ್ರೋಲ್, ಡೀಸೆಲ್ ನಲ್ಲಿ ಸಂಗ್ರಹಗೊಂಡ ಹಣವನ್ನು ಮೂಲಸೌಕರ್ಯ ಸೇರಿದಂತೆ ಇತರ ಯೋಜನೆಗಳಿಗೆ ಬಳಸಿಕೊಳ್ಳುತ್ತೇವೆ ಎಂದು ಸರ್ಕಾರ ಉತ್ತರ ನೀಡಿತ್ತು.

ಇತ್ತ ಕೆಲವೇ ದಿನಗಳಲ್ಲಿ ಬಸ್ ಪ್ರಯಾಣ ದರ ಹೆಚ್ಚಾಗುವುದು ಖಚಿತವಾಗಲಿದೆ. ರಾಜ್ಯದಲ್ಲಿ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಚಾರ್ಜ್ ಶೀಘ್ರ ದುಬಾರಿಯಾಗುವ ಸಂಭವ ಇದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇವೆ.

Comments

Leave a Reply

Your email address will not be published. Required fields are marked *