7 ವರ್ಷ ಪ್ರೀತಿಸಿ ಬೇರೆ ಮದ್ವೆಯಾದ ಪ್ರಿಯಕರ-ಕಲ್ಯಾಣ ಮಂಟಪದ ಮುಂದೆ ವರನ ಲವರ್ ಗಲಾಟೆ

ಹುಬ್ಬಳ್ಳಿ: ಕುಟುಂಬ ಸದಸ್ಯರು ಸಂಭ್ರಮದಿಂದ ಮದುವೆ ಮಾಡಿ ಸೊಸೆಯನ್ನ ಮನೆ ತುಂಬಿಸಿಕೊಳ್ಳಬೇಕು ಎನ್ನುವ ಹೊತ್ತಿಗೆ ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸುನೀಲ ಬಡಿಗೇರ ಎಂಬ ಯುವಕ ತುಮಕೂರು ಮೂಲದ ಲಕ್ಷ್ಮೀ ಎಂಬ ಯುವತಿಯನ್ನ ಏಳು ವರ್ಷದಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದ. ಆದರೆ ಕಳೆದ ಆರು ತಿಂಗಳಿಂದ ಆಕೆಗೆ ಕೈಕೊಟ್ಟಿದ್ದ ಈತ ಶುಕ್ರವಾರ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಿದ್ದಾನೆ.

ಸುನೀಲ ಮದುವೆಯಾಗುತ್ತಿರುವ ಮಾಹಿತಿ ತಿಳಿದ ಲಕ್ಷ್ಮೀ ನೇರವಾಗಿ ಮದುವೆ ಮಂಟಪಕ್ಕೆ ಆಗಮಿಸಿ ತನಗೆ ನ್ಯಾಯ ಕೊಡಿಸುವಂತೆ ಗೋಳಾಡಿದ್ದಾರೆ. ಇನ್ನು ಲಕ್ಷ್ಮೀ ಆರೋಪವನ್ನು ಕೇಳಿ ಕೋಪಗೊಂಡ ಪೋಷಕರು ಸುನೀಲನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ನಡೆದಿದ್ದು ಏನು?: ಲಕ್ಷ್ಮೀ ಕೆಲಸ ಮಾಡುವ ಶಾಲೆಯಲ್ಲಿ ಸುನೀಲನ ಅಕ್ಕ ಕೆಲಸ ಮಾಡುತ್ತಿದ್ದು, ಇಬ್ಬರು ಸ್ನೇಹಿತರಾಗಿದ್ದರು. ಇದರಿಂದ ಲಕ್ಷ್ಮೀಗೆ ಸುನೀಲನ ಪರಿಚಯವಾಗಿದ್ದು, ಆಗಾಗ ಅಕ್ಕನ ಮನೆಗೆ ಬಂದು ಹೋಗುತ್ತಿದ್ದರಿಂದ ಇವರಿಬ್ಬರ ನಡುವೆ ಸಲಿಗೆ ಬೆಳೆದು ಪ್ರೇಮಕ್ಕೆ ತಿರುಗಿದೆ. ಏಳು ವರ್ಷಗಳ ಕಾಲ ಇಬ್ಬರು ಪರಸ್ಪರ ಪ್ರೀತಿ ಮಾಡಿದ್ದು, ಈ ನಡುವೆ ಲಕ್ಷ್ಮೀ ಯನ್ನು ದೈಹಿಕವಾಗಿ ಬಳಸಿಕೊಂಡು ನಂತರ ತನಗೂ ಆಕೆಗೂ ಸಂಬಂಧವೇ ಇಲ್ಲ ಅಂತ ಜಾರಿಕೊಂಡು ಬೇರೆ ಯುವತಿಯೊಂದಿಗೆ ಮದುವೆ ಮಾಡಿಕೊಂಡಿದ್ದಾನೆ.

ಸುನೀಲ ವಿವಾಹವಾಗುವ ಸುದ್ದಿ ತಿಳಿದ ಲಕ್ಷ್ಮೀ ತನಗೆ ನ್ಯಾಯ ಕೊಡಿಸಿ ಎಂದು ಮದುವೆ ಮಂಟಪದ ಬಳಿ ಗಲಾಟೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಲಿಸರು ಸುನೀಲನನ್ನ ಠಾಣೆ ಗೆ ಕರೆಸಿ ವಿಚಾರಣೆಗೆ ಒಳಪಡಿಸಿದಾಗ ಆತ, ನನಗೂ ಲಕ್ಷ್ಮೀಗೂ ಸಂಬಂಧವೇ ಇಲ್ಲ ಅಂತ ಹೇಳಿದ್ದಾನೆ.

ಇನ್ನು ಮದುವೆ ಸಂಭ್ರಮದಲ್ಲಿದ್ದ ಸುನೀಲನ ಕಡೆಯವರು ಲಕ್ಷ್ಮೀ ಆರೋಪವನ್ನು ಕೇಳಿ ಕೋಪಗೊಂಡು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ಲಕ್ಷ್ಮೀಯನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರ ಪ್ರೇಮ ಕಹಾನಿಯ ನಡುವೆ ಮತ್ತೊಬ್ಬ ಯುವತಿ ಜೀವನ ಹಾಳಾದಂತಾಗಿದ್ದು, ಮದುವೆಯಾದ ಸಂಭ್ರಮದಲ್ಲಿ ರಾತ್ರಿ ಕಳೆಯಬೇಕಿದ್ದ ಆಕೆ ತನ್ನ ಮುಂದಿನ ಜೀವನದ ಬಗ್ಗೆ ಚಿಂತಿಸುವಂತಾಗಿದೆ.

Comments

Leave a Reply

Your email address will not be published. Required fields are marked *