ಅಪಘಾತ ರಭಸಕ್ಕೆ ಸುಟ್ಟು ಕರಕಲಾದ ಬೈಕ್ – ಸವಾರ ಸಜೀವ ದಹನ

ಉಡುಪಿ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಬೈಕ್ ಹೊತ್ತಿ ಉರಿದು, ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೈಂದೂರಿನ ಮರವಂತೆ ಸಮೀಪ ನಡೆದಿದೆ.

ಬೈಂದೂರಿನ ತಗ್ಗರ್ಸೆ ನಿವಾಸಿ ಪುನೀತ್ ಪೂಜಾರಿ ಮೃತ ದುರ್ದೈವಿ. ಈತ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿಯ ಸಹೋದರನ ಪುತ್ರನಾಗಿದ್ದು, ಜೊತೆಗಿದ್ದ ಸಹ ಸವಾರ ಆಕಾಶ್ ಸ್ಥಿತಿ ಕೂಡಾ ಗಂಭೀರವಾಗಿದೆ. ಕುಂದಾಪುರದ ಮರವಂತೆ ರಾಷ್ಡ್ರೀಯ ಹೆದ್ದಾರಿ 66 ರಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ.

ಕುಂದಾಪುರ ನಿವಾಸಿ ನಾಗಭೂಷಣ್, ಬೈಂದೂರಿನಿಂದ ಕುಂದಾಪುರ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದನು. ಈ ವೇಳೆ ಮರವಂತೆ ಸಮೀಪ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಬೈಕಿಗೆ ಬೆಂಕಿ ಹೊತ್ತಿಕೊಂಡಿದೆ.

ಬೈಕಿಗೆ ಬೆಂಕಿ ಹೊತ್ತಿದ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಪರಿಣಾಮ ಪುನೀತ್ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತಕ್ಕೀಡಾದ ಬೈಕ್ ಸುಟ್ಟು ಕರಕಲಾಗಿದ್ದು, ಕಾರು ಕೂಡ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಪುನೀತ್ ಎರಡು ದಿನಗಳ ಹಿಂದೆಷ್ಟೇ ಹೊಸ ಬೈಕ್ ಖರೀದಿ ಮಾಡಿದ್ದ.

ಈ ಘಟನೆ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ಸೇರಿದಂತೆ ಹಲವಾರು ಬಿಜೆಪಿ, ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *