ಪ್ರೀತಿಸಿ ಗರ್ಭಿಣಿ ಮಾಡ್ದ, ನ್ಯಾಯ ಕೇಳಲು ಹೋದ್ರೆ ತಾಯಿ ಎದುರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ

ಗದಗ: ಪ್ರಿಯತಮನೇ ಪ್ರೇಯಸಿಯ ಮೇಲೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನ ಮಾಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ನಡೆದಿದೆ.

ದಾಳಿಗೊಳಗಾದ ಮಹಿಳೆ ಶಾಂತವ್ವ ಮಾದರ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ. ಶುಕ್ರವಾರ ಸಾಯಂಕಾಲ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿಂಗಟಾಲೂರ ಗ್ರಾಮದ ಪ್ರಕಾಶ ಮುಂಡವಾಡ ಹಾಗೂ ಕುಟುಂಬಸ್ಥರು ಈ ಹೀನ ಕೃತ್ಯ ಮಾಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸುತ್ತಿದ್ದಾರೆ.

ಪ್ರಕಾಶ ಹಾಗೂ ಶಾಂತವ್ವ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಮನೆಯವರಿಗೆ ತಿಳಿದ ಮೇಲೆ ಎರಡು ವರ್ಷಗಳ ಹಿಂದೆ ಶಾಂತವ್ವನಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆಯಾದ ಮೇಲೂ ಪ್ರಕಾಶ ನಿನ್ನ ಬಿಟ್ಟು ಇರುವುದಿಲ್ಲ ಎಂದು ಶಾಂತವ್ವಗೆ ಹೇಳಿದ್ದಾನೆ. ಹೀಗಾಗಿ ಸಂತ್ರಸ್ತೆ ಗಂಡನನ್ನ ಬಿಟ್ಟು ತವರಿಗೆ ಬಂದಿದ್ದಾರೆ.

ಇವರಿಬ್ಬರು ಮತ್ತೆ ಪ್ರೀತಿ ಶುರು ಮಾಡಿ ಅನೈತಿಕ ಸಂಬಂಧ ಹೊಂದಿದ್ದರು. ಸಂತ್ರಸ್ತೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗುವಂತೆ ಪ್ರಕಾಶನನ್ನು ಕೇಳಿದ್ದರು. ಆದರೆ ಪ್ರಕಾಶ ಬೇರೆ ಬೇರೆ ಜಾತಿ ಮದುವೆ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದ. ಇದರಿಂದ ನೊಂದ ಸಂತ್ರಸ್ತೆ ನ್ಯಾಯ ಕೇಳಲು ಶುಕ್ರವಾರ ಸಂಜೆ ತಾಯಿಯ ಜೊತೆ ಪ್ರಕಾಶನ ಮನೆಗೆ ಹೋಗಿದ್ದರು. ನಾನು ಗಂಡನನ್ನು ಬಿಟ್ಟು ಬಂದೆ. ನನ್ನ ಜೀವನ ಹಾಳಾಗಿದೆ, ಮದುವೆಯಾಗು ಎಂದು ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಕಾಶ ಮತ್ತು ಕುಟುಂಬಸ್ಥರು ಸೇರಿ ಶಾಂತವ್ವ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಸ್ಥಳದಲ್ಲಿದ್ದ ತಾಯಿ ಭಯಗೊಂಡು ಓಡಿ ಹೋಗಿ ತಮ್ಮ ಸಹೋದರರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಅವರು ಬಂದು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಗದಗ ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಪ್ರಕಾಶ ಹಾಗೂ ಆತನ ಕುಟುಂಬದವರು ಊರು ಬಿಟ್ಟು ಪರಾರಿಯಾಗಿದ್ದಾರೆ. ಮೊಬೈಲ್ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *