ಅಪಘಾತವಾಗಿ ವ್ಯಕ್ತಿ ಸಾವು-ಬದುಕಿನ ಹೋರಾಟ- ಪತಿಯ ರಕ್ಷಣೆಗೆ ಗೋಗರೆದ್ರೂ ಚಿತ್ರೀಕರಿಸುತ್ತಾ ನಿಂತ ಜನ!

– ಚಿಕ್ಕಬಳ್ಳಾಪುರದಲ್ಲಿ ಅಮಾನವೀಯ

ಚಿಕ್ಕಬಳ್ಳಾಪುರ: ಆಟೋ ಮುಂದಿನ ಚಕ್ರ ಕಳಚಿದ ಪರಿಣಾಮ ಚಾಲಕನೋರ್ವ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದು, ಅತನ ಪತ್ನಿ ಪತಿಯ ರಕ್ಷಣೆಗೆ ಪರಿ ಪರಿಯಾಗಿ ಬೇಡಿಕೊಂಡಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದ ಬಳಿ ನಡೆದಿದೆ.

ಮಹಮದ್ ಖಾನ್(51) ಎಂಬಾತ ತನ್ನ ಆಟೋ ಮೂಲಕ ಪತ್ನಿ ಜೊತೆ ಗೌರಿಬಿದನೂರಿನಿಂದ ಸ್ವಗ್ರಾಮ ಮೇಳ್ಯಾಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಆಟೋ ಮುಂದಿನ ಚಕ್ರ ಕಳಚಿಕೊಂಡ ಪರಿಣಾಮ ಚಾಲಕ ಮೊಹಮ್ಮದ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿದ್ದ ಪತಿಯನ್ನು ಕಂಡ ಪತ್ನಿ ಅಲ್ಲಿದ್ದವರ ಬಳಿ ಸಹಾಯ ಮಾಡಿ, ತಮ್ಮ ಸಂಬಂಧಿಕರ ವಿಷಯ ತಿಳಿಸಿ ಅಂತ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಅಲ್ಲಾ ನಾನು ಏನು ಮಾಡಲಿ ಈಗ ಅಂತ ತನ್ನ ಅಸಾಹಯಕತೆಯನ್ನು ತೋಡಿಕೊಂಡಿದ್ದಾರೆ. ಕೊನೆಗೆ ಹರಸಾಹಸ ಪಟ್ಟು ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೊಹಮ್ಮದ್ ಖಾನ್ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪತಿಯ ರಕ್ಷಣೆಗೆ ಪತ್ನಿ ಗೋಗರೆಯುತಿರೋದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆಗೆ ಮುಂದಾಗದೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವುದು ಮಾನವೀಯತೆ ಮರೆಯಾಯಿತಾ ಅನ್ನೋ ಪ್ರಶ್ನೆ ಉದ್ಭವವಾಗುವಂತೆ ಮಾಡಿದೆ.

ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.

Comments

Leave a Reply

Your email address will not be published. Required fields are marked *