ಕಲಬುರಗಿಯಲ್ಲಿ ಪೆಟ್ರೋಲ್ ಬಂಕ್ ಬಂದ್ ಸುಳ್ಳು ಸುದ್ದಿ – ರಾತ್ರೋರಾತ್ರಿ ಬಂಕ್‍ಗಳಿಗೆ ಮುಗಿಬಿದ್ದ ಜನ್ರು

ಕಲಬುರಗಿ: ಕೊರೊನಾ ವೈರಸ್‍ಗೆ ಬೆಳಲಿ ಬೆಂಡಾಗಿರುವ ಕಲಬುರಗಿ ಜನತೆಗೆ ಕೆಲ ಕಿಡಿಕೇಡಿಗಳು, ಲೈಕ್ ಕಾಮೆಂಟ್‍ಗಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಇದು ಪೆಟ್ರೋಲ್ ಬಂಕ್‍ಗಳಿಗೆ ಅನ್ವಯ ಆಗುವುದಿಲ್ಲ. ಆದರೆ ಕೆಲವರು ಪೆಟ್ರೋಲ್ ಬಂಕ್ ಬಂದ್ ಆಗುತ್ತೆ ಎಂದು ಮಂಗಳವಾರ ರಾತ್ರಿ ಸುಳ್ಳು ಸಂದೇಶ ಹರಿಬಿಟ್ಟಿದ್ದರು. ಈ ಸುಳ್ಳು ಸುದ್ದಿಯಿಂದ ಭಯಗೊಂಡ ಜನ ರಾತ್ರೋರಾತ್ರಿ ಬಂಕ್‍ಗಳಿಗೆ ಮುಗಿಬಿದ್ದರು. ಪರಿಣಾಮ ಕಲಬುರಗಿಯ ಬಂಕ್‍ಗಳ ಮುಂದೆ ಮಂಗಳವಾರ ರಾತ್ರಿ ವಾಹನಗಳು ಸರದಿ ಸಾಲಿನಲ್ಲಿ ನಿಂತು ಟ್ಯಾಂಕ್ ಫುಲ್ ಮಾಡಿಸಿಕೊಂಡರು.

ಕಲಬುರಗಿಯಲ್ಲಿ ಕೊರೊನಾದಿಂದಾಗಿ ಲಾಕ್‍ಡೌನ್ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್, ಡಿಸೇಲ್ ಸಿಗಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಅಥವಾ ಇಲ್ಲಿನ ನಗರಸಭೆ ಆಗಲಿ ಯಾವುದೇ ರೀತಿಯ ಪೆಟ್ರೋಲ್ ಬಂಕ್‍ಗಳನ್ನು ಬಂದ್ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನೋಡಿ ತಮ್ಮ ದ್ವಿಚಕ್ರ ವಾಹನ ಹಾಗೂ ಕಾರು ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿಸಲು ಬಂಕ್ ಬಳಿ ಬಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಯುವಕ, ಮಂಗಳವಾರ ರಾತ್ರಿ ನನ್ನ ಸ್ನೇಹಿತ ಕರೆ ಮಾಡಿ ಈ ಮಾಹಿತಿ ನೀಡಿದ್ದನು. ಈ ವಿಷಯ ಕೇಳುತ್ತಿದ್ದಂತೆ ಹಲವು ಮಂದಿ ವಾಟರ್ ಬಾಟೆಲ್, ಫಿಲ್ಟರ್ ಕ್ಯಾನ್‍ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಡಿಸಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಈ ಸುದ್ದಿ ಹರಿದಿಡೆ. ಬಂಕ್ ಮಾಲೀಕ ಕೂಡ ಈ ಬಗ್ಗೆ ಬಾಯಿ ಬಿಟ್ಟು ಯಾರಿಗೂ ಏನೂ ಹೇಳುತ್ತಿಲ್ಲ. ನಮಗೆ ಲಾಭ ಆಗುತ್ತಿದೆ, ನಾವೇಕೆ ಹೇಳಬೇಕು ಎನ್ನುತ್ತಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *