ಮೂಕ ಪ್ರಾಣಿಗಳ ವೇದನೆಗೆ ಮರುಗಿದ ಗುಡಿಬಂಡೆ ಜನತೆ

– ಜೀವ ಸಂಕುಲದ ರಕ್ಷಣೆಗೆ ಮುಂದಾದ ಯುವಕರು

ಚಿಕ್ಕಬಳ್ಳಾಪುರ: ತೀವ್ರ ಬರ ಬಂದು ನಾಡಿನಲ್ಲಿರುವ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕಾಡಿನಲ್ಲಿರುವ ಪ್ರಾಣಿಗಳಿಗೆ ಎಲ್ಲಿ ನೀರು ಸಿಗುತ್ತೆ? ನೀರೇ ಇಲ್ಲದ ಮೇಲೆ ಆಹಾರ ಸಿಗುವುದಂತೂ ಕಷ್ಟಸಾಧ್ಯ. ಕಾಡಿನಲ್ಲಿರುವ ಪ್ರಾಣಿಗಳ ಪರದಾಟ ಕಂಡು ಮರುಗಿದ ಪಟ್ಟಣದ ಪ್ರಾಣಿಪ್ರಿಯರು ನಾಡಿನಿಂದ ದವಸ ದಾನ್ಯ, ಹಣ್ಣು ತರಕಾರಿ, ನೀರನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಉಣಬಡಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆಂಧ್ರ-ಕರ್ನಾಟಕ ಗಡಿನಾಡು ಗುಡಿಬಂಡೆ ಪಟ್ಟಣ, ಈ ಕಡೆ ಬಂದರೆ ಕರ್ನಾಟಕ, ಆ ಕಡೆ ಹೋದರೆ ಆಂಧ್ರ. ಎರಡೂ ರಾಜ್ಯಗಳ ಗಡಿಯಲ್ಲಿರುವ ಕಾಡಿನಲ್ಲಿ ಈ ಬಾರಿ ತೀವ್ರ ಬರ ಬಂದಿದೆ. ಎತ್ತ ಕಣ್ಣು ಹಾಯಿಸಿದ್ರೂ ಹಸಿರು ಮಾಯವಾಗಿದೆ. ಕಾಡಿನಲ್ಲಿರುವ ನವಿಲು, ಜಿಂಕೆ, ಕರಡಿ, ಮೊಲ, ಸಾರಂಗ ಸೇರಿದಂತೆ ಸರಿಸೃಪಗಳಿಗೆ ಕುಡಿಯಲು ನೀರೇ ಇಲ್ಲ. ನೀರಿಲ್ಲದೆ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಪ್ರಾಣಿಪ್ರಿಯರು ಪ್ರಾಣಿಗಳ ದಾಹಕ್ಕೆ ಮರುಗಿದ್ದು ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ.

ಗುಡಿಬಂಡೆಯ ಕೆಲವು ಯುವಕರು ಸ್ವಯಂಸೇವಾ ಸಂಘಗಳ ಸಹಾಯದೊಂದಿಗೆ ಅರಣ್ಯದ ಜೀವ ಸಂಕುಲದ ರಕ್ಷಣೆಗೆ ಮುಂದಾಗಿದ್ದಾರೆ. ಜೋಳ, ಅಕ್ಕಿ, ನವಣೆ, ರಾಗಿ, ಸಜ್ಜೆ, ಸೇರಿದಂತೆ ದವಸ ಧಾನ್ಯಗಳನ್ನು ಮಿಕ್ಸ್ ಮಾಡಿ, ಹಣ್ಣು ತರಕಾರಿಗಳನ್ನು ತೆಗೆದುಕೊಂಡು ಹೋಗಿ ಕಾಡಿನ ಆಯಕಟ್ಟಿನ ಜಾಗಗಳಲ್ಲಿ ಇಡುತ್ತಿದ್ದಾರೆ. ದಾನಿಗಳಿಂದ ಸಿಮೆಂಟ್ ತೊಟ್ಟಿಗಳನ್ನು ಸಂಗ್ರಹಿಸಿ ಅದರಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *