ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಭತ್ತ ನಾಟಿ ಮಾಡಿ ಸಾರ್ವಜನಿಕರ ಪ್ರತಿಭಟನೆ

ಚಾಮರಾಜನಗರ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದ ಹಲವೆಡೆ ಅವಾಂತರ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ ಕೆರೆಯಂತಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಭತ್ತದ ನಾಟಿ ಮಾಡಿ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಭರ್ಜರಿ ಮಳೆಯಾಗಿದೆ. ಕಳೆದ ಐದು ವರ್ಷದಿಂದ ಮಳೆ ಹನಿ ಕಾಣದೇ ಕಂಗಾಲಾಗಿದ್ದ ರೈತರು ಕಳೆದ ಹತ್ತು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂದಹಾಸ ಬೀರುವಂತಾಗಿದೆ. ಜಿಲ್ಲೆಯ ಕೊಳ್ಳೆಗಾಲ, ಗುಂಡ್ಲುಪೇಟೆ, ಹನೂರು ಸೇರಿದಂತೆ ಮೊದಲಾದೆಡೆ ಭರ್ಜರಿ ಮಳೆಯಾಗಿದೆ.

ಮಳೆ ಅವಾಂತರ: ಗುಂಡ್ಲುಪೇಟೆ ಭಾಗದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲದೆ ದೊಡ್ಡಕೆರೆ ತುಂಬಿ ಜಮೀನಿಗೆ ನೀರು ಹರಿದಿದೆ. ಕೊಡಹಳ್ಳಿ ಗ್ರಾಮದಲ್ಲಿ ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ ಕೆರೆಯಂತಾಗಿದೆ. ಬಸ್ ನಿಲ್ದಾಣದ ಈ ಅವಾಂತರಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *