ಪೌರತ್ವ ಕಾಯ್ದೆ ಜಾಗೃತಿ ಮೂಡಿಸಲು ಹೊರಟ ಬಿಜೆಪಿಗರು- ತರಾಟೆಗೆ ತೆಗೆದುಕೊಂಡ ಜನ

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಸಾಕಷ್ಟು ಪ್ರತಿಭಟನೆ ರ್ಯಾಲಿಗಳು ನಡೆದಿವೆ. ಆದರೆ ಬಿಜೆಪಿಯವರು ಮಾತ್ರ ಜನರಲ್ಲಿ ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಪೌರತ್ವ ಕಾಯ್ದೆ ಬಗ್ಗೆ ಜನ ಜಾಗೃತಿ ಮಾಡಲು ಬಂದಿದ್ದ ಬಿಜೆಪಿಗರನ್ನ ಅಲ್ಲಿನ ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ದಾವಣಗೆರೆ ನಗರದ ಎಸ್‍ಓಜಿ ಕಾಲೋನಿಯಲ್ಲಿ ನಡೆದಿದೆ.

ಬಿಜೆಪಿಯ ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿನಿತ್ಯ ನಗರದ ಒಂದೊಂದು ಬಡಾವಣೆಗಳಿಗೆ ಭೇಟಿ ನೀಡಿ, ಪೌರತ್ವ ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದರು. ಅದೇ ರೀತಿ ಇಂದು ಕೂಡ ನಗರದ ಎಸ್‍ಒಜಿ ಕಾಲೋನಿಯಲ್ಲಿ ಜಾಗೃತಿ ಮೂಡಿಸುವುದಕ್ಕೆ ಬಿಜೆಪಿ ಹಿರಿಯ ಮುಖಂಡರು ಆಗಮಿಸಿದ್ದರು. ಆಗ ಅಲ್ಲಿನ ಕೆಲ ಸ್ಥಳೀಯರು ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡಿದ್ದು, ನಮ್ಮ ಏರಿಯಾದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ನಾವೆಲ್ಲ ಈ ಕಾಲೋನಿಯಲ್ಲಿ ಒಗ್ಗಟ್ಟಾಗಿ ಇದ್ದೇವೆ. ನೀವು ಬಂದು ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಏರು ಧ್ವನಿಯಲ್ಲಿ ಜನರು ತರಾಟೆ ತಗೆದುಕೊಂಡರು. ಅಲ್ಲದೆ ಬಿಜೆಪಿ ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಹಾಗೂ ಬೆಂಬಲಿಗರು ಪೌರತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಮನೆ ಮನೆಗೂ ತೆರಳಿ ಕಾಯ್ದೆ ಬಗ್ಗೆ ಜನರಿಗೆ ತಿಳಿಸುವುದೇ ನಮ್ಮ ಕೆಲಸ. ಇದರಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದನ್ನು ಜನರು ಕೇಳುವ ಮಟ್ಟದಲ್ಲಿ ಇರಲಿಲ್ಲ. ನರೇಂದ್ರ ಮೋದಿ ಅವರಿಗೆ ಧಿಕ್ಕಾರ ಘೋಷಣೆ ಕೂಗಿ ಜನರು ಕಟುವಾಗಿ ವಿರೋಧಿಸಿದರು. ಬಿಜೆಪಿ ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಹಾಗೂ ಬೆಂಬಲಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆರಳಿದರು.

Comments

Leave a Reply

Your email address will not be published. Required fields are marked *