ಅನುಮಾನಾಸ್ಪದವಾಗಿ ಓಡಾಡ್ತಿದ್ದವರನ್ನ ಸಾರ್ವಜನಿಕರೇ ಹಿಡಿದುಕೊಟ್ರೂ ತನಿಖೆ ನಡೆಸದೆ ಬಿಟ್ಟು ಕಳಿಸಿದ ಪೊಲೀಸರು

ಬೆಂಗಳೂರು: ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್ ಅಂತ ಗೊತ್ತಿದ್ರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ವಾಹನವೊಂದರಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದವರನ್ನು ಸಾರ್ವಜನಿಕರೇ ಹಿಡಿದುಕೊಟ್ಟರೂ ತನಿಖೆ ನಡೆಸಲು ಪೊಲೀಸರು ಸೋಮಾರಿತನ ತೋರಿರುವುದು ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ಅನುಮಾನಾಸ್ಪದ ಕಾರೊಂದು ನಗರದಲ್ಲಿ ಓಡಾಡುತ್ತಿರುವುದನ್ನು ಮನಗಂಡ ಜನ ಹಿಡಿದುಕೊಟ್ರೂ ಪೊಲೀಸರು ಮಾತ್ರ ಡೋಂಟ್‍ಕೇರ್ ಎಂದಿದ್ದಾರೆ. ಗುರುವಾರ ರಾತ್ರಿ ನೃಪತುಂಗ ರಸ್ತೆಯಲ್ಲಿ ಬಿಎಂಡಬ್ಲ್ಯು ಕಾರಿನಲ್ಲಿ ನಾಲ್ವರು ಅಪರಿಚಿತರು ಓಡಾಡುತ್ತಿದ್ದರು. ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಗಮನಿಸಿದ ಶಶಾಂಕ್ ಎಂಬವರು ತಕ್ಷಣ ಅಲ್ಲೆ ಇದ್ದ ಟ್ರಾಫಿಕ್ ಪೊಲೀಸರ ಸಹಾಯದಿಂದ ಆರೋಪಿಯೊಬ್ಬನನ್ನು ಹಲಸೂರು ಪೊಲೀಸರಿಗೆ ಹಿಡಿದುಕೊಟ್ಟಿದ್ದರು. ಆದ್ರೆ ಆರೋಪಿಗಳ ಬಗ್ಗೆ ತನಿಖೆಯನ್ನೂ ನಡೆಸದೇ ಎಎಸ್‍ಐ ಭೀಮಾನಾಯ್ಕ್ ಹಾಗೇ ಬಿಟ್ಟು ಕಳಿಸಿದ್ದಾರೆ. ಯಾಕೆ ಬಿಟ್ಟು ಬಿಟ್ರಿ ಅಂದ್ರೆ ತಲೆನೋವು ಅಂದಾ ಅದ್ಕೆ ಬಿಟ್ಟೆ ಅಂತಾ ಉಡಾಫೆ ಉತ್ತರ ನೀಡಿದ್ದಾರೆ.

ಬೆಂಗಳೂರು ಪೊಲೀಸರ ಈ ಬೇಜವಾಬ್ದಾರಿತನದ ಬಗ್ಗೆ ಆರ್ಮಿ ಫೋರಂ ಅಧ್ಯಕ್ಷ ಶಶಾಂಕ್ ಅಸಮಾಧಾನಗೊಂಡು ಹಿರಿಯ ಪೊಲೀಸರಿಗೆ ದೂರು ನೀಡಿದ್ದಾರೆ. ಆಗಸ್ಟ್ 15 ಹತ್ತಿರ ಬರ್ತಿದ್ದು ಬೆಂಗಳೂರು ಕೂಡ ಉಗ್ರರ ಟಾರ್ಗೆಟ್ ಅಂತ ಗೊತ್ತಿದ್ರೂ ಪೊಲೀಸರಿಂದಲೇ ಕರ್ತವ್ಯಲೋಪ ಎಸಗಿರೋದಕ್ಕೆ ಶಶಾಂಕ್ ಆಕ್ರೋಶಗೊಂಡಿದ್ದಾರೆ.

ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕೊಡಿ ಅಂತಾರೆ. ಆದ್ರೆ ಮಾಹಿತಿ ಕೊಟ್ರೂ ಪೊಲೀಸರು ಕಾರ್ಯೋನ್ಮುಕರಾಗದಿರುವುದು ವಿಷಾದನೀಯ ಎಂದು ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.

 

 

Comments

Leave a Reply

Your email address will not be published. Required fields are marked *