ವಿಚಿತ್ರ ಶಬ್ದಕ್ಕೆ ಬೆಚ್ಚಿ ಬಿದ್ದ ಜನ – ಮತ್ತೆ ಜಲಸ್ಫೋಟದ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯ ಪೇರೂರಿನ ಇಗ್ಗುತ್ತಪ್ಪ ಬೆಟ್ಟದಲ್ಲಿ ನಿಗೂಢ ಶಬ್ದ ಕೇಳಿ ಬರುತ್ತಿದೆ. ಭೂಮಿಯೊಳಗಿನಿಂದ ನದಿಯಲ್ಲಿ ನೀರು ಹರಿಯುವಂತಹ ಶಬ್ದ ಕೇಳುತ್ತಿದ್ದು, ಈ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.

ಮಡಿಕೇರಿ ತಾಲೂಕಿನ ಪೇರೂರಿನಲ್ಲಿರುವ ಕೊಡಗಿನ ಕುಲದೇವರು ಇಗ್ಗುತ್ತಪ್ಪ ಬೆಟ್ಟದಲ್ಲಿ ಈ ಶಬ್ದ ಕೇಳಿ ಬರುತ್ತಿದೆ. ಭಾರೀ ಪ್ರಮಾಣದ ಈ ಬೆಟ್ಟದ ತಪ್ಪಲಿನಲ್ಲಿ 20 ಕುಟುಂಬಗಳಿದ್ದು, ಆಕಸ್ಮಾತ್ ಜಲಸ್ಫೋಟವಾಗಿ ಬೆಟ್ಟ ಕುಸಿದಲ್ಲಿ ಭಾರೀ ಅನಾಹುತವೇ ನಡೆಯಲಿದೆ. ಹೀಗಾಗಿ ಏನಾಗುವುದೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

ಕಳೆದ ಹಲವು ದಿನಗಳಿಂದಲೂ ಈ ವಿಚಿತ್ರ ಶಬ್ದ ಕೇಳಿ ಬರುತ್ತಿದ್ದು, ಮೂರು ದಿನಗಳಿಂದ ಆ ಶಬ್ದ ಮತ್ತಷ್ಟು ಜೋರಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಅಯ್ಯಂಗೇರಿಯಲ್ಲೂ ಒಂದು ವಾರದ ಹಿಂದೆಯಷ್ಟೇ ನಿಗೂಢ ಶಬ್ದ ಕೇಳಿ ಬಂದಿತ್ತು.

ಆಗಸ್ಟ್ ತಿಂಗಳಲ್ಲಿ ಮಳೆ ಸುರಿದಾಗ ಈ ಇಗ್ಗುತ್ತಪ್ಪ ದೇವಾಲಯದ ಸಮೀಪದಲ್ಲಿ ಬೆಟ್ಟ ಕುಸಿದಿತ್ತು. ಇದೀಗ ಭೂಮಿಯೊಳಗೆ ನದಿ ಹರಿಯುತ್ತಿರುವ ಶಬ್ದ ಕೇಳುತ್ತಿರುವುದರಿಂದ ಅನಾಹುತ ಸಂಭವಿಸುವುದಾ ಎನ್ನುವ ತೀವ್ರ ಆತಂಕ ಜನರಲ್ಲಿ ಕಾಡತೊಡಗಿದೆ.

2018ರಲ್ಲೂ ಮಡಿಕೇರಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಆದಂತಹ ಭೂಕುಸಿತಕ್ಕೂ ಮೊದಲು ಇದೇ ರೀತಿಯ ಶಬ್ದ ಕೇಳಿ ಬಂದಿತ್ತು. ಬಳಿಕ 7 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 37 ಗ್ರಾಮಗಳಲ್ಲಿ ಜಲಸ್ಫೋಟ ಸಂಭವಿಸಿತ್ತು. ಕಳೆದ ರಾತ್ರಿಯೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *