ಗುರುಗಳ ಮೇಲಿನ ಅಭಿಮಾನದಿಂದ ಯಾರಾದ್ರೂ ಪ್ರತಿಭಟಿಸಿದ್ರೆ ಅದು ಅವರ ವೈಯಕ್ತಿಕ ವಿಚಾರ: ಪೇಜಾವರಶ್ರೀ

ಉಡುಪಿ: ಗುರುಗಳ ಮೇಲಿರುವ ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರವರ ವೈಯಕ್ತಿಕ ವಿಚಾರ. ನಾವಂತೂ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಹಂಸಲೇಖ ಟೀಕೆಗೆ ಉತ್ತರಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದು ನನ್ನ ಗುರುಗಳಿಗೆ. ಹಂಸಲೇಖ ಅವರು ನನ್ನ ಗುರುಗಳನ್ನೇ ಟೀಕಿಸಿರಬೇಕು. ಇಂತಹ ಮಾತು ಹಂಸಲೇಖ ಬಾಯಿಂದ ಬರಬಾರದಿತ್ತು. ಸಮಾಜ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ ಎಂದರು.

ಪ್ರಚಾರಕ್ಕೋಸ್ಕರ ಸಾಕಷ್ಟು ಮಂದಿ ಹೀಗೆ ಮಾಡುತ್ತಾರೆ. ಹಂಸಲೇಖ ಅವರಿಗೆ ಇದರಿಂದ ಪ್ರಚಾರ ಬೇಕಾಗಿರಲಿಲ್ಲ. ಶ್ರೀ ಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನೂ ಇದೇ ರೀತಿ ವಿರೋಧಿಸಿದ್ದ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ. ನನ್ನ ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕೃಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

ನೆರೆಹಾವಳಿ ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರವನ್ನು ವಿಶ್ವೇಶತೀರ್ಥರು ಬಯಸಿದ್ದರು. ಗುರುಗಳು ಜನರ ಹೃದಯದಲ್ಲಿ ಯಾವ ಕೃಷ್ಣನನ್ನು ಕಂಡಿದ್ದರೋ ಆ ಕೃಷ್ಣನೇ ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ. ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸವನ್ನು ಮಾಡಿದ್ದಲ್ಲ. ದಲಿತರ ಜೊತೆ ನಾವು ಇದ್ದೇವೆ ದಲಿತರು ನಮ್ಮಿಂದ ಹೊರತಲ್ಲ. ಈ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *