ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಹಸ್ತ – ದಲಿತರ ಎದುರೇ ಕೃಷ್ಣನ ಪೂಜೆ

ಚಿಕ್ಕಮಗಳೂರು: ಕೃಷ್ಣನ ಪರಮಭಕ್ತ ಪೇಜಾವರ ಶ್ರೀಗಳು ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಯ ಕನಸು ಕಂಡಿದ್ದರು. ಮಲೆನಾಡಿನ ಕುಗ್ರಾಮಗಲ್ಲಿ ಭೇಟಿ ನೀಡಿ ವಾಸ್ತವ್ಯ ಹೂಡಿದ್ದ ಶ್ರೀಗಳು ಮಲೆನಾಡಿಗೆ ಹಲವು ಕೊಡುಗೆಗಳನ್ನ ನೀಡಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನ ದಲಿತರ ಕುಗ್ರಾಮ ಮೆಣಸಿನಹಾಡ್ಯದಲ್ಲಿ ವಾಸ್ತವ್ಯ ಮಾಡಿದ್ದ ಪೇಜಾವರ ಶ್ರೀಗಳು ಬೆಳಗ್ಗೆ ಹಳ್ಳದ ಪಕ್ಕದಲ್ಲೇ ಕೃಷ್ಣನ ಪೂಜೆ ಮಾಡಿದ್ದರು. ಸ್ಥಳಿಯರ ಪ್ರಕಾರ ಋಷಿಮುನಿಗಳು ತಪ್ಪಸ್ಸು ಮಾಡಿದ್ದ ಜಾಗ, ಋಷಿಮುನಿಗಳ ಪರಂಪರೆ, ಸನ್ಯಾಸಿಗಳ ಸಂಸ್ಕೃತಿಯೇ ಕಾಡು ಎಂದು ಹಳ್ಳದಲ್ಲಿ ತಾವು ತಂದಿದ್ದ ಪೂಜಾ ಸಾಮಾಗ್ರಿಗಳನ್ನ ತೊಳೆದು ಅಲ್ಲೇ ಶ್ರೀಗಳು ಪೂಜೆ ಮಾಡಿದ್ದರು. ಕೃಷ್ಣನಿಗೆ ಎಡೆ ಇಡಲು ಅಲ್ಲೇ ಅನ್ನವನ್ನೂ ತಯಾರಿಸಿದ್ದರು. ಅವರ ಪೂಜಾ-ಕೈಂಕರ್ಯ ಎಲ್ಲಾ ಮುಗಿಯೋವರೆಗೂ ಪೂಜೆಯನ್ನ ನೋಡಲು ದಲಿತರಿಗೆ ಅವಕಾಶ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.

ಮಲೆನಾಡಿನಲ್ಲಿ ಶ್ರೀಗಳು:
ಕಾಫಿನಾಡು ಹಾಗೂ ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶಕ್ಕೂ ಪೇಜಾವರ ಶ್ರೀಗಳಿಗೂ ಅವಿನಾಭಾವ ಸಂಬಂಧವಿತ್ತು. ಬಡವರು, ದೀನ-ದಲಿತರು ಹಾಗೂ ಹಿಂದುಳಿದ ವರ್ಗದವರ ಕಷ್ಟಕ್ಕೆ ನೆರವಾಗುತ್ತಿದ್ದ ಪೇಜಾವರ ಶ್ರೀಗಳು, ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಯ ಕನಸು ಕಂಡು ಸಹಾಯ ಹಸ್ತ ನೀಡಿದ್ದರು.

ದೂರದಿಂದ ಕುಡಿಯೋ ನೀರನ್ನ ಹೊತ್ತು ತರುತ್ತಿದ್ದ ಹಿಂದುಳಿದ ವರ್ಗದ ಕುಟುಂಬಸ್ಥರಿಗೆ ಪೈಪ್ ಲೈನ್ ಮೂಲಕ ನೀರಿನ ಸೌಲಭ್ಯ ಕಲ್ಪಿಸಿಕೊಳ್ಳಲು ಹಣದ ನೆರವನ್ನು ಶ್ರೀಗಳು ನೀಡಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಗ್ಗತ್ತಲಲ್ಲಿದ್ದ ಕುಟುಂಬಗಳಿಗೆ ಶ್ರೀಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಾಯ ಮಾಡಿದ್ದರು. ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕೂ ಪೇಜಾವರ ಶ್ರೀಗಳು ನೆರವಾಗಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣದ ನೆರವು ನೀಡಿದ್ದರು. ಮಲೆನಾಡಿನ ನಕ್ಸಲ್ ಪೀಡಿತ ಹಾಗೂ ಕುಗ್ರಾಮಗಳ ಅಭಿವೃದ್ಧಿಯ ಕನಸು ಕಂಡಿದ್ದ ಶ್ರೀಗಳು ಮಲೆನಾಡಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಪೇಜಾವರ ಶ್ರೀಗಳ ಅಗಲಿಕೆಗೆ ಪಂಚಪೀಠಗಳ ಜಗದ್ಗುರು ಬಾಳೆಹೊನ್ನೂರಿನ ವೀರ ಸೋಮೇಶ್ವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಪೇಜಾವರ ಶ್ರೀಗಳು, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಷ್ಟ್ರಾಭಿಮಾನದ ಸಂಸ್ಕೃತಿ ಸಂವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರ ಎಲ್ಲಾ ಆಶಯಗಳು ಸಕಾರಗೊಳ್ಳಲಿ ಎಂದು ಸಂತಾಪ ಸೂಚಿಸಿದರು.

Comments

Leave a Reply

Your email address will not be published. Required fields are marked *