ಜಾತಿ ಆಧಾರದ ಮೇಲೆ ಸಚಿವ ಸ್ಥಾನ ಕೇಳುವುದು ತಪ್ಪು- ಪೇಜಾವರ ಶ್ರೀ

ಮೈಸೂರು: ಜಾತಿ ಆಧಾರದ ಮೇಲೆ ಸಚಿವ ಸ್ಥಾನ ಕೇಳುವುದು ತಪ್ಪು. ಇದರ ಬಗ್ಗೆ ನಾನು ಸರ್ಕಾರಕ್ಕೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಇಂದು ಮೈಸೂರಿನಲ್ಲಿ ಜಿಲ್ಲಾ ಬ್ರಾಹ್ಮಣ ಸಂಘ ಪೇಜಾವರ ಶ್ರೀಗಳಲ್ಲಿ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿದ್ದು, ಸಂಘದ ಮನವಿಯನ್ನು ಪೇಜಾವರ ಶ್ರೀಗಳು ತಿರಸ್ಕರಿಸಿದ್ದಾರೆ. ಜಾತಿ ಆಧಾರದ ಮೇಲೆ ಸಚಿವ ಸ್ಥಾನ ಕೇಳುವುದು ತಪ್ಪು. ಇದರ ಬಗ್ಗೆ ನಾನು ಸರ್ಕಾರಕ್ಕೆ ಯಾವುದೇ ಒತ್ತಡ ಹೇರುವುದಿಲ್ಲ. ನಾನು ಮಠಾಧೀಶ, ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಎಂದು ತಿಳಿಸಿದ್ದಾರೆ.

ಅನರ್ಹ ಶಾಸಕರನ್ನು ಸಹ ಸರ್ಕಾರ ತೃಪ್ತಿಪಡಿಸಬೇಕಿದೆ. ಮೈಸೂರು ಭಾಗದಲ್ಲಿ ವಿಶ್ವನಾಥ್‍ಗೆ ಸ್ಥಾನ ಕಲ್ಪಿಸುವ ಸಲುವಾಗಿ ರಾಮದಾಸ್‍ಗೆ ಸ್ಥಾನ ಕೊಟ್ಟಿಲ್ಲ. ಅನರ್ಹ ಶಾಸಕರನ್ನು ತೃಪ್ತಿ ಪಡಿಸುವ ಜವಾಬ್ದಾರಿ ಸಿಎಂ ಮೇಲಿದೆ. ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟಿನಲ್ಲಿದೆ. ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಸರ್ಕಾರ ಸೂಕ್ತ ತೀರ್ಮಾನ ಮಾಡುತ್ತದೆ. ರಾಮದಾಸ್ ದಸರಾದಲ್ಲಿ ಪಾಲ್ಗೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಶ್ರೀಗಳು ಹೇಳಿದರು.

ಶಾಸಕ ಎಸ್.ಎ.ರಾಮದಾಸ್ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬ್ರಾಹ್ಮಣ ಸಂಘದಿಂದ ರಾಮದಾಸ್ ಪರ ಬ್ಯಾಟಿಂಗ್ ಮಾಡಿದ್ದು, ಎಸ್.ಎ.ರಾಮದಾಸ್‍ಗೆ ಸಚಿವ ಸ್ಥಾನ ನೀಡುವಂತೆ ಪೇಜಾವರ ಶ್ರೀಗಳ ಮೂಲಕ ಒತ್ತಡ ಹೇರಲು ಪ್ರಯತ್ನಿಸಲಾಗಿತ್ತು. ಮೈಸೂರು ನಗರ ಹಾಗೂ ಗ್ರಾಮಾಂತರ ಬ್ರಾಹ್ಮಣ ಸಂಘದಿಂದ ಪೇಜಾವರ ಶ್ರೀಗಳಿಗೆ ಮನವಿ ಸಲ್ಲಿಸಲಾಗಿತ್ತು.

ಶಾಸಕ ರಾಮದಾಸ್‍ಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೆ, ಡಿಸಿಎಂ ಹುದ್ದೆಯನ್ನು ಬ್ರಾಹ್ಮಣ ಸಮುದಾಯಕ್ಕೆ ಮೀಸಲಿಡಬೇಕು. ಈ ಎರಡು ವಿಚಾರವನ್ನು ಸರ್ಕಾರದ ಮೆಲ್ಮಟ್ಟದಲ್ಲಿ ಒತ್ತಡ ಹೇರುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು. ಶ್ರೀಗಳ ಮೂಲಕ ಸರ್ಕಾರಕ್ಕೆ ಒತ್ತಡ ಹೇರಲು ಬ್ರಾಹ್ಮಣ ಸಮುದಾಯದ ಮುಖಂಡರು ಮುಂದಾಗಿದ್ದರು. ಆದರೆ, ಶ್ರೀಗಳು ಇದೆಲ್ಲವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದು, ಸರ್ಕಾರ ಈಗಲೇ ಒತ್ತಡದಲ್ಲಿದೆ. ಇಂತಹ ಸಮಯದಲ್ಲಿ ಈ ರೀತಿ ಒತ್ತಡ ಹೇರುವುದು ಸರಿಯಲ್ಲ. ನಾನು ಮಠಾಧೀಶ ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *