ಮಹಿಳೆಯನ್ನ ಬಂಧನದಲ್ಲಿಟ್ಟುಕೊಂಡ ವೈದ್ಯರು- ಅಮ್ಮನ ಆಸ್ಪತ್ರೆ ಬಿಲ್ ಕಟ್ಟಲು ಭಿಕ್ಷೆ ಬೇಡ್ತಿದ್ದ 7ರ ಬಾಲಕನ ರಕ್ಷಣೆ

ಪಾಟ್ನಾ: ಆಸ್ಪತ್ರೆಯ ಬಿಲ್ ಕಟ್ಟುವವರೆಗೂ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳಿ ಮಹಿಳೆಯೊಬ್ಬರನ್ನ ಆಸ್ಪತ್ರೆಯ ಸಿಬ್ಬಂದಿ ಬಂಧನದಲ್ಲಿರಿಸಿಕೊಂಡಿದ್ದ ಕಾರಣ ಆಕೆಯ 7 ವರ್ಷದ ಮಗ ರಸ್ತೆಯಲ್ಲಿ ಭಿಕ್ಷೆ ಬೇಡಿದ ಕರುಣಾಜನಕ ಘಟನೆ ಬಿಹಾರದಲ್ಲಿ ನಡೆದಿದೆ.

ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ 31 ವರ್ಷದ ಲಲಿತಾ ದೇವಿ ಅವರಿಗೆ ಹೆರಿಗೆಯಾಗಿದ್ದು, ಮಗು ಸಾವನ್ನಪ್ಪಿತ್ತು. ಆಸ್ಪತ್ರೆಯವರು 70 ಸಾವಿರ ರೂ. ಬಿಲ್ ಆಗಿದೆ ಎಂದು ಹೇಳಿದ್ದರು. ಹೀಗಾಗಿ ಮಹಿಳೆಯ 7 ವರ್ಷದ ಮಗ ಬಿಲ್ ಕಟ್ಟಲು ರಸ್ತೆಯಲ್ಲಿ ಭಿಕ್ಷೆ ಬೇಡಿದ್ದಾನೆ. ಕೊನೆಗೆ ಮಾದೇಪುರ ಸಂಸದ ಪಪ್ಪು ಯಾದವ್ ಮಧ್ಯಪ್ರದೇಶಿಸಿ ತನ್ನ ಕ್ಷೇತ್ರದವರಾದ ಲಲಿತಾ ದೇವಿ ಅವರನ್ನು ಭಾನುವಾರದಂದು ರಕ್ಷಣೆ ಮಾಡಿದ್ದಾರೆ. ಆಸ್ಪತ್ರೆ ಆಡಳಿತದ ವಿರುದ್ಧ ಈಗ ಎಫ್‍ಐಆರ್ ದಾಖಲಾಗಿದೆ.

ಪಾಟ್ನಾ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ನವೆಂಬರ್ 14ರಂದು ಲಲಿತಾ ಅವರಿಗೆ ವೈದ್ಯಕೀಯ ಸಮಸ್ಯೆ ಉಂಟಾಗಿದ್ದರಿಂದ ಏಜೆಂಟ್‍ವೊಬ್ಬರ ಮೂಲಕ ಮಾ ಶೀತ್ಲಾ ಎಮರ್ಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬದವರಿಗೆ 1.5 ಲಕ್ಷ ರೂ. ಹಣ ಹೊಂದಿಸಿಕೊಳ್ಳುವಂತೆ ಹೇಳಲಾಗಿತ್ತು. ಆದ್ರೆ ಬಳಿಕ ವೈದ್ಯಕೀಯ ಮೊತ್ತವನ್ನು 70 ಸಾವಿರ ರೂ.ಗೆ ಇಳಿಸಲಾಗಿತ್ತು. ಆದ್ರೆ ಲಲಿತಾ ದೇವಿ ಅವರ ಪತಿ ನಿರ್ಧನ್ ರಾಮ್ ಅವರಿಗೆ 25 ಸಾವಿರ ಮಾತ್ರ ಕಟ್ಟಬೇಕಷ್ಟೇ ಎಂದು ಏಜೆಂಟ್ ಹೇಳಿದ್ದರು. ಆ ಹಣವನ್ನು ನಿರ್ಧನ್ ರಾಮ್ ಡೆಪಾಸಿಟ್ ಮಾಡಿದ್ದರು.

ಆದರೆ ಮಗು ಸಾವನ್ನಪ್ಪಿದ್ದರಿಂದ ವೈದ್ಯರು ಸ್ಟಿಚ್‍ಗಳನ್ನ ಬಿಚ್ಚದೇ ಬಾಕಿ ಹಣ ಕಟ್ಟುವವರೆಗೆ ದೇವಿ ಅವರನ್ನ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಲಲಿತಾ ಅವರ ಪತಿ ಸಂಬಂಧಿಕರ ಬಳಿ ಕೇಳಿ ಸ್ವಲ್ಪ ಹಣವನ್ನ ಹೊಂದಿಸಿದ್ದರು. ಉಳಿದ ಹಣಕ್ಕಾಗಿ ಲಲಿತಾ ಅವರ ಮಗ ಭಿಕ್ಷೆ ಬೇಡಲು ಮುಂದಾಗಿದ್ದ.

 

ಮಾದೇಪುರದ ಕೆಲವು ನಿವಾಸಿಗಳು ಹಾಗೂ ಕೆಲವು ಸ್ಥಳೀಯ ವಾಹಿನಿಗಳ ಮೂಲಕ ಈ ವಿಷಯ ಪಪ್ಪು ಯಾದವ್ ಅವರ ಗಮನಕ್ಕೆ ಬಂದಿತ್ತು. ನಂತರ ಯಾದವ್ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ. ಅಲ್ಲದೆ ಲಲಿತಾ ದೇವಿ ಅವರಿಗೆ ಆಸ್ಪತ್ರೆಯವರೇ 10 ಸಾವಿರ ರೂ. ಹಣ ಹಿಂದಿರುಗಿಸುವಂತೆ ಮಾಡಿದ್ದು, ಆಂಬುಲೆನ್ಸ್ ಮೂಲಕ ಮನೆಗೆ ಡ್ರಾಪ್ ಮಾಡಿಸಿದ್ದಾರೆ.

ಆಸ್ಪತ್ರೆಯ ಮಾಲೀಕರಾದ ನಿಶಾ ಭಾರ್ತಿ ಕೇವಲ ಪದವಿ ಪೂರೈಸಿದ್ದು ತಾನೊಬ್ಬ ವೈದ್ಯೆ ಎಂದು ಹೇಳಿಕೊಂಡಿದ್ದಾರೆ. ಆಸ್ಪತ್ರೆಯನ್ನ ರೆಜಿಸ್ಟರ್ ಕೂಡ ಮಾಡಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯ ಆಗೋಗ್ಯ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

 

Comments

Leave a Reply

Your email address will not be published. Required fields are marked *