ಪೊಳ್ಳು ಯೋಜನೆಗಳನ್ನು ಉತ್ತೇಜಿಸುವ ಮಾರ್ಕೆಟಿಂಗ್ ಕಂಪನಿಯಲ್ಲಿ ನಾನಿರಲಾರೆ: ಬಿಜೆಪಿ ತೊರೆದ ರೇಷ್ಮಾ ಪಟೇಲ್

ಗಾಂಧಿನಗರ: ಬಿಜೆಪಿ ಪೊಳ್ಳು ಯೋಜನೆಗಳನ್ನು ಉತ್ತೇಜಿಸುವ ಮಾರ್ಕೆಟಿಂಗ್ ಕಂಪೆನಿಯಾಗಿದೆ ಎಂದು ರೇಷ್ಮಾ ಪಟೇಲ್ ವಾಗ್ದಾಳಿ ನಡೆಸಿ, ಪಕ್ಷವನ್ನು ತೊರೆದಿದ್ದಾರೆ.

ಗುಜರಾತ್‍ನ ರಾಜ್‍ಕೋಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಷ್ಮಾ ಪಟೇಲ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಜೀತು ವಾಘನಿ ಅವರಿಗೆ ರಾಜೀನಾಮೆ ಪತ್ರ ನೀಡಿದ್ದೇನೆ. ಬಿಜೆಪಿಯು ತನ್ನ ಕಾರ್ಯಕರ್ತರು ಹಾಗೂ ನಾಯಕರನ್ನು ಪೊಳ್ಳು ಯೋಜನೆಗಳ ಮಾರುಕಟ್ಟೆಯನ್ನಾಗಿ ಬಳಸಿಕೊಳ್ಳುತ್ತಿದೆ. ಹೀಗಾಗಿ ನಾನು ಪಕ್ಷದಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.

ಪೋರಬಂದರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಸಿದ್ಧತೆ ಕೂಡ ನಡೆಸಿರುವೆ. ವಿರೋಧ ಪಕ್ಷಗಳು ಒಗ್ಗಟ್ಟಾಗಿ ಒಂದೇ ವೇದಿಕೆಯಲ್ಲಿ ಸೇರಬೇಕು. ನನಗೆ ಒಂದು ಅವಕಾಶ ನೀಡಬೇಕು ಎಂದು ಕೇಳಿಕೊಂಡಿರುವೆ. ಇದರಿಂದಾಗಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗುತ್ತದೆ ಎಂದು ಮನವಿ ಮಾಡಿಕೊಂಡರು.

ಒಂದು ವೇಳೆ ವಿರೋಧ ಪಕ್ಷಗಳು ನನಗೆ ಅವಕಾಶ ನೀಡದಿದ್ದರೇ, ಪೋರಬಂದರು ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ರೇಷ್ಮಾ ಪಟೇಲ್ ತಿಳಿಸಿದ್ದಾರೆ.

33 ವರ್ಷದ ರಾಜಕಾರಣಿ ಬಿಜೆಪಿಗೆ ಮಾರ್ಕೆಟಿಂಗ್ ಕಂಪನಿ ಎಂದು ರಾಜೀನಾಮೆ ಪತ್ರದಲ್ಲಿ ರೇಷ್ಮಾ ಪಟೇಲ್ ಬರೆದಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೂಲಕ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ. ಈ ಮೂಲಕ ತಪ್ಪು ನೀತಿಗಳು ಮತ್ತು ಯೋಜನೆಗಳನ್ನು ಉತ್ತೇಜಿಸಿ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತದೆ. ಬಿಜೆಪಿ ನಾಯಕರು ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ಈ ಅನ್ಯಾಯವನ್ನು ಸಹಿಸಿಕೊಳ್ಳುವ ಮತ್ತು ಇದಕ್ಕೆ ಸಾಕ್ಷಿಯಾಗಲು ನನಗೆ ತಾಳ್ಮೆಯಿಲ್ಲ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯಿಂದಾಗಿ ನಾನು ಪಕ್ಷದಿಂದ ಹೊರಬಂದಿರುವೆ ಎಂದು ರೇಷ್ಮಾ ತಿಳಿಸಿದ್ದಾರೆ.

ರೇಷ್ಮಾ ಅವರು ಪಟೇಲ್ ಆಂದೋಲನದಲ್ಲಿ ಗುರುತಿಸಿಕೊಂಡಿದ್ದರು. ಸುಮಾರು ಎರಡೂವರೆ ವರ್ಷ ಕಾಲ ಮಹಿಳಾ ನಾಯಕಿಯಾಗಿ ರೇಷ್ಮಾ ಪಟೇಲ್ ಚಳುವಳಿ ನಡೆಸಿದರು. ಆದರೆ ಇತ್ತೀಚೆಗೆ ಬಿಜೆಪಿ ಸೇರಿದ್ದರು. ಬಿಜೆಪಿ ಕೇವಲ ಭರವಸೆ ಕೊಡುವ ಪಕ್ಷವಾಗಿದೆ ಎಂದು ಆರೋಪಿಸಿ ಪಕ್ಷದಿಂದ ಹೊರ ಬಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *