ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

ನವದೆಹಲಿ: ಲೋಕಸಭೆಯ (Lok Sabha) ಮೇಲೆ ದಾಳಿ ನಡೆಸಿದ್ದ ಮೈಸೂರು (Mysuru) ಮೂಲದ ಮನೋರಂಜನ್‌ (Manoranjan) ಮೂರು ಬಾರಿ ಸಂಸದ ಪ್ರತಾಪ್ ಸಿಂಹ (Pratap Simha) ಕಚೇರಿಯಿಂದ ಪಾಸ್ (Pass) ಪಡೆದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಕಳೆದ ಅಧಿವೇಶನದ ಸಮಯದಲ್ಲಿ ಹೊಸ ಸಂಸತ್ ವೀಕ್ಷಣೆ ನೆಪದಲ್ಲಿ ಎರಡು ಬಾರಿ ಮನೋರಂಜನ್ ಪಾಸ್‌ ಪಡೆದಿದ್ದ. ಪಾಸ್ ಪಡೆದು ವೀಕ್ಷಕರ ಗ್ಯಾಲರಿಯವರೆಗೂ ಇರುವ ಭದ್ರತಾ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದಾನೆ. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

 

ಸುದೀರ್ಘ ಅಧ್ಯಯನ ಮಾಡಿದ ಮನೋರಂಜನ್‌ ದಾಳಿ ನಡೆಸಲು ಸ್ಕೆಚ್‌ ರೂಪಿಸಿ ಮತ್ತೆ ಪಾಸ್‌ ನೀಡುವಂತೆ ಮನವಿ ಮಾಡಿದ್ದಾನೆ. ಈ ವೇಳೆ ಪಾಸ್‌ ನೀಡಲು ಪ್ರತಾಪ್‌ ಸಿಂಹ ಕಚೇರಿ ನಿರಾಕರಿಸಿದೆ. ಪದೇ ಪದೇ ಪಾಸ್ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಲಾಗಿತ್ತು. ಬಳಿಕ ಮೈಸೂರಿನ ಆಪ್ತ ಸಹಾಯಕರ ಮೂಲಕ ಒತ್ತಡ ಹೇರಿ ದೆಹಲಿಯಲ್ಲಿರುವ ಪ್ರತಾಪ್ ಸಿಂಹರ ಕಚೇರಿಯಿಂದ ಪಾಸ್ ಪಡೆದಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನನ್ನ ಮಗ ಯಾವತ್ತಿಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡ್ತಿದ್ದ: ಮನೋರಂಜನ್ ತಂದೆ ಮಾತು

ಒಂದು ಪಾಸ್‌ನಲ್ಲಿ ಇಬ್ಬರು ಸಂಸತ್ ಪ್ರವೇಶ ಮಾಡಲು ಅವಕಾಶವಿದೆ. ಪಾಸ್ ಅನ್ನು ಸಂಗ್ರಹ ವಸ್ತುವಾಗಿ ಇಟ್ಟುಕೊಳ್ಳಲು ಸಾಗರ್ ಶರ್ಮ (Sagar Sharma) ಇಷ್ಟ ಪಟ್ಟಿದ್ದಾನೆ. ಹೀಗಾಗಿ ಸಾಗರ್ ಹೆಸರಲ್ಲಿ ಪಾಸ್ ಕೊಡಿ ಎಂದು ಮಂಗಳವಾರ ಸಂಜೆ ಪಾಸ್‌ ಪಡೆದುಕೊಂಡಿದ್ದ. ಅದರಂತೆ ಮನೋರಂಜನ್ ಹಾಗೂ ಸಾಗರ್ ಶರ್ಮ ಸಂಸತ್ ಪ್ರವೇಶ ಮಾಡಿದ್ದರು.

 

ಕಾಕಾತಾಳೀಯ:
ಮನೋರಂಜನ್‌ ಸೋಮವಾರ ಪಾಸ್‌ ನೀಡುವಂತೆ ಮನವಿ ಮಾಡಿದ್ದ. ಆದರೆ ಸೋಮವಾರ ಪಾಸ್‌ ನೀಡಲು ಪ್ರತಾಪ್‌ ಸಿಂಹ ಕಚೇರಿ ನಿರಾಕರಿಸಿತ್ತು. ಪದೇ ಪದೇ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಾಪ್‌ ಸಿಂಹ ಕಚೇರಿ ಮಂಗಳವಾರ ಕರೆ ಮಾಡಿ ಬುಧವಾರದ ಪಾಸ್‌ ನೀಡಿತ್ತು. ಕಾಕತಾಳೀಯ ಎನ್ನುವಂತೆ ಸಂಸತ್ ದಾಳಿಯ ದಿನದಂದೇ ಈ ದುರ್ಘಟನೆ ನಡೆದಿದೆ.