ಕೋಲ್ಕತ್ತಾ: ಪೋಷಕರೇ ತಮ್ಮ 16 ವರ್ಷದ ಮಗಳನ್ನು ಕೊಂದು ಆಕೆಯ ದೇಹವನ್ನು ಗಂಗಾ ನದಿಯಲ್ಲಿ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಗಳನ್ನು ಧಿರೇನ್ ಮೊಂಡಾಲ್ ಮತ್ತು ಆತನ ಪತ್ನಿ ಸುಮತಿ ಮೊಂಡಾಲ್ ಎಂದು ಗುರುತಿಸಲಾಗಿದೆ. ಈ ಘಟನೆ ಭೂತ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹೇಂದ್ರತೋಲಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಶನಿವಾರ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ಬಾಲಕಿ ಪಕ್ಕದ ಹಳ್ಳಿಯ ನಿವಾಸಿ ಅಚಿಂತ್ಯ ಮೊಂಡಾಲ್ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಈ ಬಗ್ಗೆ ತಿಳಿದ ಬಾಲಕಿಯ ಪೋಷಕರು ಅವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಬಾಲಕಿ ಯುವಕನೊಂದಿಗೆ ಸಂಬಂಧ ಮುಂದುವರಿಸಿದ್ದಾಳೆ. ಇದರಿಂದ ಕೋಪಗೊಂಡ ಪೋಷಕರು ಮಗಳನ್ನು ಕೊಲೆ ಮಾಡಿ ನಂತರ ಮೂಟೆಯಲ್ಲಿ ಮೃತದೇಹವನ್ನು ತುಂಬಿ ಗಂಗಾನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಆರೋಪಿಗಳ ಮನೆಗೆ ಹೋಗಿ ಧಿರೇನ್ ಮತ್ತು ಆತನ ಪತ್ನಿ ಸುಮತಿ ಇಬ್ಬರನ್ನು ಬಂಧಿಸಲಾಗಿದೆ. ಇದೊಂದು ಮಾರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply