ಮಂಡ್ಯ: ಮಗಳು ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಹೆತ್ತವರಿಗೆ ಬಹಿಷ್ಕಾರದ ಶಿಕ್ಷೆ ವಿಧಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ತಿಗಳ ಸಮುದಾಯದ ಯಶೋಧ ಒಕ್ಕಲಿಗ ಸಮುದಾಯದ ವೆಂಕಟರಾಜು ಜೊತೆ ವಿವಾಹವಾಗಿದ್ದಳು. ಯಶೋಧ ಅಂತರ್ಜಾತಿ ವಿವಾಹಕ್ಕೆ ಅವರ ಕುಟುಂಬ ಒಪ್ಪಿಗೆ ನೀಡಿತ್ತು. ಆದರೆ ಗ್ರಾಮದ ಮುಖಂಡ ಅಪ್ಪಾಜಿ ಹಾಗೂ ಆತನ ಹಿಂಬಾಲಕರು ಈ ಮದುವೆಯನ್ನು ವಿರೋಧಿಸಿದ್ದರು.
ಯಶೋಧ ಗರ್ಭಿಣಿಯಾಗಿದ್ದರಿಂದ ಹೆತ್ತವರು ಆಕೆಯನ್ನು ತವರಿಗೆ ಕರೆ ತಂದಿದ್ದರು. ಅನ್ಯಜಾತಿ ಯುವಕನನ್ನು ಮದುವೆಯಾಗಿದ್ದ ಮಗಳನ್ನು ಮತ್ತೆ ಮನೆಗೆ ಸೇರಿಸಿ ಕುಲಕ್ಕೆ ಅಪಮಾನ ಮಾಡಿದ್ದೀರಿ ಎಂದು ಬಹಿಷ್ಕಾರ ಹಾಕಿದ್ದಾರೆ. ಮೊದಲು ಯಶೋಧ ಕುಟುಂಬಕ್ಕೆ 25 ಸಾವಿರ ದಂಡ ಹಾಕಿ, ಮನೆಯಿಂದ ಮಗಳನ್ನು ಹೊರಹಾಕುವಂತೆ ಸೂಚನೆ ನೀಡಿದ್ದರು.

ಪಂಚಾಯ್ತಿ ಮಾಡಿ ಗ್ರಾ.ಪಂ. ಸದಸ್ಯ ಅಪ್ಪಾಜಿ ಹಾಗೂ ಆತನ ಹಿಂಬಾಲಕರು ತೀರ್ಮಾನಿಸಿದ್ದರು. ದಂಡ ಕಟ್ಟದೇ ಇರೋದಕ್ಕೆ ತಿಗಳ ಕುಲದಿಂದ ಯಶೋಧ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಅಪ್ಪಾಜಿ ತೀರ್ಮಾನ ಪ್ರಶ್ನಿಸಿ, ಯಶೋಧ ಕುಟುಂಬಸ್ಥರಿಗೆ ದೇವಾಲಯಕ್ಕೆ ಪ್ರವೇಶ ಕೊಡಿಸಿದ್ದ ಸ್ಥಳೀಯ ವಕೀಲ ಪುಟ್ಟಮಾದು ಕುಟುಂಬಕ್ಕೂ ಬಹಿಷ್ಕಾರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ತಿಗಳ ಜನಾಂಗದ ಯಾರೋಬ್ಬರು ಈ ಎರಡು ಕುಟುಂಬದ ಜೊತೆ ಮಾತನಾಡಬಾರದು. ಈ ಕುಟುಂಬದ ಸದಸ್ಯರಿಗೆ ದೇವಾಲಯಕ್ಕೆ ಪ್ರವೇಶ ನೀಡುವಂತಿಲ್ಲ, ಈ ಕುಟುಂಬದವರನ್ನು ಯಾರು ಕೂಲಿಗೆ ಕರೆಯುವಂತಿಲ್ಲ. ಹೀಗೆ ಹಲವು ಷರತ್ತುಗಳನ್ನು ಹಾಕಿ ಬಹಿಷ್ಕಾರದ ಆದೇಶ ನೀಡಿದ್ದಾರೆ. ಅಲ್ಲದೇ ಯಾರಾದರೂ ಈ ಎರಡು ಕುಟುಂಬದ ಜೊತೆ ಮಾತನಾಡಿದರೆ, 1 ಸಾವಿರ ದಂಡ ಹಾಗೂ ಮಾತನಾಡುವುದನ್ನು ಪಂಚಾಯ್ತಿ ಗಮನಕ್ಕೆ ತಂದರೆ 500 ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಮುಖಂಡರ ಈ ತೀರ್ಮಾನಗಳಿಂದ ಮನನೊಂದಿರುವ ಯಶೋಧ ಕುಟುಂಬಸ್ಥರು, ನ್ಯಾಯ ದೊರಕಿಸಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply