ಯುಗಾದಿಗೆ ಬರೋ ಪಂಚಾಂಗ ನಂತರ ಮುಂದೆ ಏನಾಗುತ್ತೆ ಅಂತ ಹೇಳ್ತೀನಿ: ರೇವಣ್ಣ

ಬೆಂಗಳೂರು: ನಾನು ಎರಡು ಪಂಚಾಂಗ ನೋಡಿದ್ದೀನಿ. ತಮಿಳುನಾಡು ಪಂಚಾಂಗದ ಪ್ರಕಾರ ಎಚ್.ಡಿ.ಕುಮಾರಸ್ವಾಮಿ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ. ಇನ್ನೊಂದು ಪಂಚಾಂಗ ಯುಗಾದಿಯಾದ ಬಳಿಕ ಬರುತ್ತದೆ. ಆಗ ಅದನ್ನು ನೋಡಿ ಮುಂದೆ ಏನಾಗುತ್ತದೆ ಅಂತ ತಿಳಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ವೈರಿಗಳನ್ನು ಸದೆಬಡಿಯಲು ಗುರುಗಳ ಆಶೀರ್ವಾದ ಬೇಕು. ಅದಕ್ಕಾಗಿ ಆಗಾಗ ಶೃಂಗೇರಿ ಗುರುಗಳನ್ನು ಭೇಟಿ ಆಗುತ್ತೇವೆ. ಪಂಚಾಂಗ ನೋಡಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಕಮಲ ನಿಲ್ಲಿಸಿದರು. ತಮ್ಮ ಕೈಯಿಂದ ಏನೂ ಆಗಲ್ಲ ಅಂತಾನೆ ಸುಮ್ಮನಾಗಿದ್ದರೆ ಎಂದ ಅವರು, ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿಯವರು ಏನು ಮಾಡುತ್ತಾರೆ ಅಂತ ತಿಳಿಯಲು ಅವರ ಬಳಿಗೆ ನಾವೇ ಶಾಸಕರನ್ನು ಕಳಿಸಿಕೊಟ್ಟಿದ್ದೇವೆ ಎಂದು ಲೇವಡಿ ಮಾಡಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಳ್ಳೆಯವರು. ಆದರೆ ಅವರ ಗ್ರಹಚಾರ ಕೆಟ್ಟದಾಗಿರುವ ಕಾರಣಕ್ಕೆ ಹೀಗಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಏನು ತೀರ್ಮಾನ ತಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ. ಬೇಲೂರಿನಲ್ಲಿ ಕಳೆದ ಬಾರಿ ನನ್ನ ಮಗ ಅಥವಾ ಪತ್ನಿ ಯಾರೇ ನಿಂತಿದ್ದರು ಗೆಲ್ಲುತ್ತಿದ್ದರು. ಆದರೆ ದೇವೇಗೌಡರು ಎಲ್ಲ ಜಾತಿಗೂ ಸಮಾನವಾಗಿ ಕೊಡಬೇಕು ಅಂತಾ ಬೇರೆಯವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರು ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ಅವರ ಹೇಳಿಕೆ ನಾನು ಪ್ರತಿಕ್ರಿಯೆ ನೀಡಲ್ಲ. ಒಂದು ವೇಳೆ ನಾನು ಮಾತನಾಡಿದರೆ ಪೊಳ್ಳೆದ್ದು ಹೋಗುತ್ತೇನೆ. ಸೀಟ್ ಹಂಚಿಕೆಯನ್ನು ದೊಡ್ಡವರು ನೋಡಿಕೊಳ್ಳುತ್ತಾರೆ ಎಂದರು.

ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ವಿರುದ್ಧ ಗುಡುಗಿದ ಸಚಿವ ರೇವಣ್ಣ, ರಾಯರೆಡ್ಡಿ ಬಂಡವಾಳ ನನಗೇನು ಗೊತ್ತಿಲ್ವೇನ್ರೀ? ರಾಯರೆಡ್ಡಿ ಹತ್ರ ಹೇಳಿಸಿಕೊಂಡು ಕುಮಾರಸ್ವಾಮಿ ಅಧಿಕಾರ ನಡೆಸಬೇಕೆನ್ರೀ? ಸಚಿವರಾಗಿದ್ದಾಗ ಅವರು ಏನು ಮಾಡಿದ್ರು ಅಂತಾ ಗೊತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವುದಕ್ಕೆ ಕುಮಾರಸ್ವಾಮಿ ಅವರೇ ಬರಬೇಕಾಯ್ತು ಎಂದು ಲೇವಡಿ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *