ಅಭಿನಂದನ್‍ಗೆ ಹೊಡೆದು, ಗಾಯಗೊಳಿಸಿದ್ದ ಪಾಕ್ ಯೋಧನನ್ನು ಹತ್ಯೆಗೈದ ಭಾರತೀಯ ಸೇನೆ

ನವದೆಹಲಿ: ಪಾಕ್ ಭೂಪ್ರದೇಶದಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದು ಹಿಂಸೆ ನೀಡಿದ್ದ ಪಾಕ್ ಯೋಧನೊಬ್ಬನನ್ನು ಭಾರತೀಯ ಯೋಧರು ಹತ್ಯೆಗೈದಿದ್ದಾರೆ.

ಪಾಕಿಸ್ತಾನದ ಅಹ್ಮದ್ ಖಾನ್ ಭಾರತೀಯ ಯೋಧರ ಗುಂಡಿಗೆ ಬಲಿಯಾದ ಯೋಧ. ಅಹ್ಮದ್ ಖಾನ್ ಪಾಕ್ ಸೇನೆಯಲ್ಲಿ ಸುಬೇದಾರ್ ಆಗಿ ಕೆಲಸ ಮಾಡುತ್ತಿದ್ದ. ಅಹ್ಮದ್ ಖಾನ್ ಆಗಸ್ಟ್ 17ರಂದು ಕಾಶ್ಮೀರದ ನಕ್ಯಾಲ್ ಗಡಿ ನಿಯಂತ್ರಣಾ ರೇಖೆಯ ಮೂಲಕ ಭಾರತದ ಭೂಪ್ರದೇಶದೊಳಕ್ಕೆ ನುಸುಳಲು ಯತ್ನಿಸಿದ್ದ. ಇದನ್ನು ಗಮನಿಸಿದ ನಮ್ಮ ಸೈನಿಕರು ಗುಂಡು ಹಾರಿಸಿದ್ದಾರೆ. ಪರಿಣಾಮ ಅಹ್ಮದ್ ಖಾನ್‍ಗೆ ಗುಂಡು ತಗುಲಿ ಪ್ರಾಣ ಬಿಟ್ಟಿದ್ದಾನೆ. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

 

ಅಹ್ಮದ್ ಖಾನ್ ನೌಶೆರಾ ಸುಂದರ್ ಬಾನಿ ಹಾಗೂ ಪಲ್ಲಾನ್ ವಾಲಾ ಸೆಕ್ಟರ್ ಪ್ರದೇಶದಲ್ಲಿ ಭಾರತದೊಳಗೆ ನುಸುಳುವ ಉಗ್ರರಿಗೆ ಸಹಕರಿಸುತ್ತಿದ್ದ. ಉತ್ತಮ ತರಬೇತಿ ಪಡೆದಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸೇನಾ ಮೂಲಗಳಿಂದ ಲಭ್ಯವಾಗಿದೆ.

ಕೃಷ್ಣ ಘಾಟಿ ಪ್ರದೇಶದಲ್ಲಿ ಆಗಸ್ಟ್ 17ರಂದು ಪಾಕ್ ಸೇನೆ ಗುಂಡಿನ ದಾಳಿ ನಡೆಸಿತ್ತು. ಈ ಮೂಲಕ ಅತಿಕ್ರಮಣಕಾರರು ಭಾರತದೊಳಗೆ ನುಸುಳಲು ಸಹಕರಿಸುತಿತ್ತು. ಇದರಿಂದಾಗಿ ಭಾರತೀಯ ಸೇನೆಯು ಪ್ರತಿ ದಾಳಿ ನಡೆಸಿದ ಸಂದರ್ಭದಲ್ಲಿ ಅಹಮ್ಮದ್ ಖಾನ್ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ವರ್ಧಮಾನ್ ತಮ್ಮ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕಿಸ್ತಾನದಲ್ಲಿ ಪತನಗೊಂಡಿತ್ತು. ಆಗ ಪಾಕ್ ಕೆಲ ಯೋಧರು ಅಭಿನಂದನ್ ಅವರ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅವರನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಸುಮಾರು 58 ಗಂಟೆಗಳ ಕಾಲ ಅಭಿನಂದನ್ ಪಾಕಿಸ್ತಾನದ ಕಸ್ಟಡಿಯಲ್ಲೇ ಇದ್ದರು. ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.

Comments

Leave a Reply

Your email address will not be published. Required fields are marked *