360 ಭಾರತೀಯ ಮೀನುಗಾರರ ಬಿಡುಗಡೆಗೆ ನಿರ್ಧರಿಸಿದ ಪಾಕ್!

– ಭಾರತ ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ!

ಇಸ್ಲಮಾಬಾದ್: ಪಾಕಿಸ್ತಾನದ ಸೆರೆಮನೆಯಲ್ಲಿ ಬಂಧಿಯಾಗಿರುವ 360 ಭಾರತೀಯ ಮೀನುಗಾರರನ್ನು ಇದೇ ತಿಂಗಳು ಬಿಡುಗಡೆಗೊಳಿಸಲಿದ್ದೇವೆ ಎಂದು ಪಾಕ್ ವಿದೇಶಾಂಗ ಕಚೇರಿ ಶುಕ್ರವಾರದಂದು ತಿಳಿಸಿದೆ.

ಅರೇಬಿಯನ್ ಸಮುದ್ರದಲ್ಲಿ ಪಾಕ್ ಪ್ರದೇಶಿಕ ಜಲ ಭಾಗದಲ್ಲಿ, ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡಿದ ಆರೋಪದಡಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಆದರೆ ಸದ್ಯ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಕ್ ವಿದೇಶಾಂಗ ಕಚೇರಿ ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿದೆ.

ಏಪ್ರಿಲ್ 15 ರಂದು ಭಾರತೀಯ ಕೈದಿಗಳನ್ನು ನಾಲ್ಕು ಬ್ಯಾಚ್ ಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಭಾರತೀಯ ಕಡಲ ಏಜೆನ್ಸಿಗಳು ಪರಸ್ಪರರ ಮೀನುಗಾರರನ್ನು ಅಕ್ರಮ ಮೀನುಗಾರಿಕೆಯ ಆರೋಪದಲ್ಲಿ ಬಂಧಿಸಿವೆ. ಈ ಸಂಬಂಧ ಸೌಹಾರ್ದ ಸನ್ನೆಗಳು ಎರಡೂ ರಾಷ್ಟ್ರಗಳಿಂದ ಬರುವವರೆಗೂ ಬಂಧನಕ್ಕೊಳಗಾದವರನ್ನು ಜೈಲಿನಲ್ಲಿ ಸಾಮಾನ್ಯ ಕೈದಿಗಳನ್ನಾಗಿ ಇರಿಸಲಾಗುತ್ತದೆ.

ಫೆ. 14ರಂದು ಪುಲ್ವಾಮದಲ್ಲಿ ನಡೆದ ಜೈಷ್ ಉಗ್ರರ ಆತ್ಮಾಹುತಿ ದಾಳಿಗೆ ಭಾರತೀಯ ಸಿಆರ್‍ಪಿಎಫ್‍ನ 40ಕ್ಕೂ ಹೆಚ್ಚು ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪತ್ಯುತ್ತರವಾಗಿ ಭಾರತೀಯ ವಾಯುಪಡೆ ಪಾಕ್ ಗಡಿಯ ಬಾಲಾಕೋಟ್‍ನಲ್ಲಿ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿ 200ಕ್ಕೂ ಹೆಚ್ಚು ಮಂದಿ ಉಗ್ರರನ್ನು ಸದೆಬಡಿದಿದ್ದರು. ಆ ಬಳಿಕ ಭಾರತ- ಪಾಕ್ ಗಡಿಯಲ್ಲಿ ಗುಂಡಿನ ಸದ್ದು ಜೋರಾಗಿಯೇ ಇದ್ದು, ಎರಡು ರಾಷ್ಟ್ರಗಳಲ್ಲಿಯೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಶುಕ್ರವಾರದಂದು ಕೂಡ ಕಾಶ್ಮೀರ ಗಡಿಯಲ್ಲಿ ಎರಡು ರಾಷ್ಟ್ರಗಳ ನಡುವೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಭಾರತೀಯ ಸೇನೆಯ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ಕು ಮಂದಿ ಮಕ್ಕಳು ಸೇರಿದಂತೆ ಓಟ್ಟು ಆರು ಮಂದಿ ಅಮಾಯಕ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಪಾಕ್ ಸೇನೆ ಆರೋಪಿಸಿದೆ.

Comments

Leave a Reply

Your email address will not be published. Required fields are marked *