ಬಲೂಚಿಸ್ತಾನ್‌ನಲ್ಲಿ ಮತ್ತೆ ಪಾಕ್‌ ಉಗ್ರರ ಅಟ್ಟಹಾಸ – ನಿದ್ರೆಯಲ್ಲಿದ್ದ 7 ಕಾರ್ಮಿಕರು ಚಿರನಿದ್ರೆಗೆ

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ್‌ (Balochistan) ಪ್ರಾಂತ್ಯದಲ್ಲಿ ಮತ್ತೆ ನೆತ್ತರು ಹರಿದಿದೆ. ಪಾಕ್‌ ಪಂಜಾಬ್‌ ಪ್ರಾಂತ್ಯದ ಕನಿಷ್ಠ 7 ಕಾರ್ಮಿಕರನ್ನ ಪ್ರತ್ಯೇಕತಾವಾದಿ ಉಗ್ರರ ಗುಂಪು ಹತ್ಯೆ ಮಾಡಿರುವುದಾಗಿ ಭಾನುವಾರ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಮುಲ್ತಾನ್‌ನ ಕಾರ್ಮಿಕರು ಶನಿವಾರ ತಡರಾತ್ರಿ ಪಂಜ್‌ಗುರ್ ಪಟ್ಟಣದ ಖುದಾ-ಎ-ಅಬದಾನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರಲ್ಲಿ ಮಲಗಿದ್ದರು. ಈ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಬಲೂಚಿಸ್ತಾನ್ ಪೊಲೀಸ್ ಮಹಾನಿರೀಕ್ಷಕ ಮೊವಾಝಮ್ ಜಾ ಅನ್ಸಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ತತ್ತರಿಸಿದ ನೇಪಾಳ – ಪ್ರವಾಹ, ಭೂಕುಸಿತದಿಂದ 112 ಮಂದಿ ಸಾವು

ಶಸ್ತ್ರ ಸಜ್ಜಿನ ಭಯೋತ್ಪಾದಕರು ನಿರ್ಮಾಣ ಹಂತದಲ್ಲಿರುವ ಮನೆಗೆ ನುಗ್ಗಿದಾಗ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದರು. ಈ ವೇಳೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ (Automatic Weapons) ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ಗಂಭೀರ ಗಾಯಗೊಂಡಿದ್ದ ಓರ್ವ ಕಾರ್ಮಿಕ ಮಾತ್ರ ಬಚಾವ್‌ ಆಗಿದ್ದಾನೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್, ಬಲೂಚಿಸ್ತಾನ ಮುಖ್ಯಮಂತ್ರಿ ಮೀರ್ ಸರ್ಫ್ರಾಜ್ ಬುಗ್ತಿ ಅವರಿಂದ ವರದಿ ಘಟನೆ ಕುರಿತು ವರದಿ ಕೇಳಿದ್ದಾರೆ. ಬಲೂಚಿಸ್ತಾನದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಹ ತಿಳಿಸಿದ್ದಾರೆ. ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ‌ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್‌ ಲೀಡರ್‌ ಟಾರ್ಗೆಟ್‌!

ಇದಕ್ಕೂ ಮುನ್ನ ಶನಿವಾರ ಕ್ವೆಟ್ಟಾದಲ್ಲಿ ಬಲೂಚಿಸ್ತಾನ್ ನ್ಯಾಷನಲ್ ಪಾರ್ಟಿ-ಮೆಂಗಲ್ (BNP-M)ನ ಹಿರಿಯ ನಾಯಕ ಅಘಾ ಖಾಲಿದ್ ಶಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು, ಗ್ಯಾಂಗ್‌ ಲೀಡರ್‌ನ ಸೋದರಸಂಬಂಧಿ ಗಾಯಗೊಂಡಿದ್ದರು. ಇದಾದ ಮರುದಿನವೇ ಈ ಘಟನೆ ನಡೆದಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

ಬಲೂಚಿಸ್ತಾನ್‌ನಲ್ಲಿ ಹೆಚ್ಚಿದ ಹತ್ಯೆ:
ಇತ್ತೀಚೆಗಷ್ಟೇ ಪಾಕಿಸ್ತಾನದ (Pakistan) ಬಲೂಚಿಸ್ತಾನ್ ಮುಸಾಖೆಲ್ ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ಕನಿಷ್ಠ 23 ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಭಯೋತ್ಪಾದಕರು ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಲು ಒತ್ತಾಯಿಸಿ, ಅವರ ಗುರುತುಗಳನ್ನು ಪರಿಶೀಲಿಸಿದ ನಂತರ ಗುಂಡು ಹಾರಿಸಿದ್ದರು. ಇದಾದ ನಂತರ ಬಲೂಚಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಹೆಚ್ಚಾಗಿದೆ.