ಭಾರತಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದ ಪಾಕಿಸ್ತಾನದ ವಿದೇಶಾಂಗ ಸಚಿವ!

ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾಹ್ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.

ಭಾರತೀಯ ವಾಯುಪಡೆ ಇಂದು ಪಾಕಿಸ್ತಾನದ ಮೇಲೆ ಆಕ್ರಮಣ ನಡೆಸಿದೆ. ಭಾರತ ಗಡಿ ನಿಯಂತ್ರಣ ರೇಖೆಯನ್ನು ದಾಟಿ ನಮ್ಮ ಮೇಲೆ ದಾಳಿ ನಡೆಸಿದೆ. ಇದಕ್ಕೆ ನಾವು ಪ್ರತೀಕಾರವನ್ನು ಕೈಗೊಳ್ಳುತ್ತೇವೆ ಎಂದು ಖುರೇಷಿ ಕಿಡಿಕಾರಿದ್ದಾರೆ. ಇದನ್ನು ಓದಿ: ಪಾಕಿಸ್ತಾನಕ್ಕೆ ಅಮೇರಿಕ 1 ಡಾಲರ್ ಆರ್ಥಿಕ ನೆರವನ್ನು ನೀಡಬಾರದು: ನಿಕ್ಕಿ ಹ್ಯಾಲೆ

ಸರ್ಜಿಕಲ್ ಸ್ಟ್ರೈಕ್ 2 ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿದ ಖುರೇಷಿ ಅವರು, ದಾಳಿಯ ಸಂಬಂಧ ಚರ್ಚೆ ನಡೆಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಭೆ ಕರೆದಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ಗೋಖಲೆ ಅವರು, ನಮ್ಮ ಗುರಿಯಿದ್ದ ಪ್ರದೇಶಗಳು ಜೈಶ್ ಉಗ್ರರ ಕ್ಯಾಂಪ್ ಆಗಿತ್ತು. ಹಲವು ಉಗ್ರರು, ತರಬೇತಿದಾರರು ಮತ್ತು ಕಮಾಂಡರ್ ಗಳು ನಮ್ಮ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ದಾಳಿ ನಡೆದ ಸ್ಥಳಗಳು ಅರಣ್ಯ ಪ್ರದೇಶದಲ್ಲಿದ್ದು ಯಾವುದೇ ಜನರಿಗೆ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

ಬಾಲಕೋಟ್ ಉಗ್ರರ ನೆಲೆಯನ್ನು ಮೌಲಾನ ಯೂಸೂಫ್ ಅಜರ್ ಅಲಿಯಾಸ್ ಉಸ್ತಾದ್ ನೋಡಿಕೊಳ್ಳುತ್ತಿದ್ದ. ಈತ ಜೈಷ್ ಮುಖ್ಯಸ್ಥ ಮಸೂದ್ ಅಜರ್ ಸಹೋದರನಾಗಿದ್ದಾನೆ. ಬಾಲಕೋಟ್ ಜೈಷ್ ಸಂಘಟನೆಯ ಅತಿ ದೊಡ್ಡ ಕ್ಯಾಂಪ್ ಆಗಿತ್ತು ಎಂದು ತಿಳಿಸಿದ್ದಾರೆ.

ಉಗ್ರರ ಬಗ್ಗೆ ಭಾರತ ಹಲವು ಬಾರಿ ಮಾಹಿತಿ ನೀಡಿದರೂ ಪಾಕಿಸ್ತಾನ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಹೀಗಾಗಿ ಈ ಬಾರಿ ನಾವೇ ನೇರವಾಗಿ ಹೋಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ದಾಳಿ ಬಗ್ಗೆ ಸಮರ್ಥನೆ ನೀಡಿದ್ದಾರೆ.

ಇದೇ ವೇಳೆ ಜೈಷ್ ಸಂಘಟನೆ ದೇಶದ ಹಲವೆಡೆ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ನಮಗೆ ಖಚಿತ ಗುಪ್ತಚರ ಮಾಹಿತಿಗಳು ಸಿಕ್ಕಿವೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *