ಲವ್‌ ಗುರು ಆದ ಪಾಕಿಸ್ತಾನದ ಹಂಗಾಮಿ ಪ್ರಧಾನಿ- ವೀಡಿಯೋ ವೈರಲ್‌

ಇಸ್ಲಾಮಾಬಾದ್:‌ ಪಾಕಿಸ್ತಾನದ (Pakistan) ಹಂಗಾಮಿ ಪ್ರಧಾನಿ ಅನ್ವಾರ್-ಉಲ್-ಹಕ್ ಕಾಕರ್ ಅವರು ʼಲವ್‌ ಗುರುʼ ಆಗುವ ಮೂಲಕ ಸದ್ಯ ಸುದ್ದಿಯಲಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಕಾಕರ್‌ (Anwaar-ul-Haq Kakar) ಅವರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಮ್ಮ ದೇಶದ ಜನರ ಕೆಲ ಪ್ರಶ್ನೆಗಳಿಗೆ ನೀಡಿರುವ ಉತ್ತರ ಇದೀಗ ಸಾಕಷ್ಟು ವೈರಲ್‌ ಆಗುತ್ತಿದೆ.

52 ವರ್ಷದ ವ್ಯಕ್ತಿಯೊಬ್ಬ ತನ್ನ ಆಯ್ಕೆಯ ಮಹಿಳೆಯನ್ನು ಮದುವೆಯಾಗಬೇಕು. ಇದಕ್ಕೆ ನಾನು ಏನು ಮಾಡಬೇಕು ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಕಾಕರ್‌, ಖಂಡಿತವಾಗಿಯೂ ನಿಮ್ಮ ಆಯ್ಕೆಯ ಮಹಿಳೆಯನ್ನು ಮದುವೆಯಾಗಬಹುದು. ನಿಮಗೆ 82 ವರ್ಷ ವಯಸ್ಸಾದರೂ ಇದನ್ನು ಪರಿಗಣಿಸಬಹುದು ಎಂದು ಹೇಳಿದ್ದಾರೆ.

ಹುಚ್ಚು (ವಿಪರೀತ ಆಸಕ್ತಿ) ಅತ್ತೆ ಇದ್ದರೆ ಏನು ಮಾಡಬೇಕು ಎಂದು ಮತ್ತೊಬ್ಬರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ಬಹುಶಃ ಬಿಕ್ಕಟ್ಟು ನಿರ್ವಹಣೆ ಕೋರ್ಸ್ ಗೆ ಹೋಗಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಸತ್ತೇ ಹೋದೆ ಅಂದ್ಕೊಂಡೆ – ಅವಘಡಕ್ಕೀಡಾದ ವಿಮಾನದೊಳಗಿದ್ದ ಪ್ರಯಾಣಿಕ

ಒಬ್ಬ ವ್ಯಕ್ತಿಯ ಬಳಿ ಹಣವಿಲ್ಲದೆ ಆತ ಯಾರನ್ನಾದರೂ ಮೆಚ್ಚಿಸಲು ಬಯಸಿದರೆ ಏನು ಮಾಡಬೇಕು ಎಂದು ಕಾಕರ್‌ ಅವರ ಬಳಿ ಮತ್ತೊಂದು ಪ್ರಶ್ನೆ ಕೇಳಲಾಯಿತು. ಈ ವೇಳೆ ಅವರು, ತಮ್ಮ ಜೀವನದಲ್ಲಿ ಯಾರನ್ನೂ ಮೆಚ್ಚಿಸಲು ಪ್ರಯತ್ನಿಸಿಲ್ಲ, ಆದರೆ ಅವರು ಯಾವಾಗಲೂ ಇತರರಿಂದ ಪ್ರಭಾವಿತರಾಗುತ್ತಿರುವುದಾಗಿ ತಿಳಿಸಿದರು.

ಒಂದು ವೇಳೆ ವಿದೇಶದಲ್ಲಿ ಉದ್ಯೋಗ ಸಿಕ್ಕಿ ಪ್ರೀತಿ ತೊರೆಯಬೇಕಾದಂತಹ ಅನಿವಾರ್ಯತೆ ಬಂದರೆ ಏನು ಮಾಡಬೇಕು ಎಂದು ಕೇಳಿದಾಗ ಕಾಕರ್, ನಿಮಗೆ ಆಕಸ್ಮಿಕವಾಗಿ ಪ್ರೀತಿ ಸಿಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ಸಿಗುತ್ತದೆ. ಈ ಮೂಲಕ ಪ್ರೀತಿಯನ್ನು ಪಡೆಯುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗವನ್ನು ಹೊಂದಲು ನಿಮಗೆ ಅವಕಾಶವಿರುವುದರಿಂದ ಅದನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿರುವ ಪಾಕಿಸ್ತಾನದ ನೂತನ ಹಂಗಾಮಿ ಪ್ರಧಾನಿಯನ್ನಾಗಿ ಸಂಸದ ಅನ್ವಾರ್- ಉಲ್- ಹಕ್ ಕಾಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಸಂಸತ್‌ನ ಅವಧಿಯು ಮುಗಿಯುವ ಮೂರು ದಿನ ಮೊದಲೇ ಪ್ರಧಾನಿಯಾಗಿದ್ದ ಶೆಹಬಾಜ್ ಷರೀಫ್ ಸಂಸತ್ ವಿಸರ್ಜಿಸಿದ್ದರು. ಹೀಗಾಗಿ ಅನ್ವಾರ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ‌ ಈ ವರ್ಷ ಫೆಬ್ರವರಿ 8 ರಂದು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ನಡೆಯಲಿದೆ.